ಆಗ್ರಾ: ಶನಿವಾರ ಶ್ರಾವಣ ಮಾಸದ ಸಂದರ್ಭದಲ್ಲಿ ಉತ್ತರ ಪ್ರದೇಶದ ಆಗ್ರಾದ ತಾಜ್ ಮಹಲ್‌ನಲ್ಲಿ ಗಂಗಾಜಲವನ್ನು ಅರ್ಪಿಸಿದ ಆರೋಪದ ಮೇಲೆ ಬಲಪಂಥೀಯ ಸಂಘಟನೆಯ ಇಬ್ಬರನ್ನು ಬಂಧಿಸಲಾಗಿದೆ.
ತಾಜ್ ಮಹಲ್ ಅನ್ನು ‘ತೇಜೋಮಹಾಲಯ’, ಶಿವ ಮಂದಿರ ಎಂದು ಪರಿಗಣಿಸಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪವಿತ್ರ ನೀರನ್ನು ಅರ್ಪಿಸಿದ್ದೇವೆ ಎಂದು ಬಂಧಿತರು ಹೇಳಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಭಾದೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಳ್ಳುವ ಇಬ್ಬರನ್ನು ತಾಜ್ ಮಹಲ್ ಆವರಣದಿಂದ ಬಂಧಿಸಿರುವುದನ್ನು ತಾಜ್‌ಗಂಜ್ ಪೊಲೀಸರು ಖಚಿತಪಡಿಸಿದ್ದಾರೆ.
ಷಹಜಹಾನ್ ಮತ್ತು ಮುಮ್ತಾಜ್ ಮಹಲ್ ಅವರ ಮೂಲ ಸಮಾಧಿಗಳನ್ನು ಹೊಂದಿರುವ ತಾಜ್ ಮಹಲ್‌ನ ನೆಲಮಾಳಿಗೆಗೆ ಹೋಗುವ ಮುಚ್ಚಿದ ಮೆಟ್ಟಿಲುಗಳ ಮೇಲೆ ಆರೋಪಿಗಳಲ್ಲಿ ಒಬ್ಬರು ಪ್ಲಾಸ್ಟಿಕ್ ಬಾಟಲಿಯಿಂದ ನೀರನ್ನು ಸುರಿಯುವುದನ್ನು ವಿಡಿಯೊ ಕ್ಲಿಪ್ ತೋರಿಸುತ್ತದೆ. ತಾಜ್ ಮಹಲ್ ಸ್ಮಾರಕವಲ್ಲ,ಅದು ಶಿವನ ದೇವಾಲಯ ಎಂದು ಅವರು ವಾದಿಸಿದ್ದಾರೆ. ಓಂ ಎಂದಿರುವ ಸ್ಟಿಕ್ಕರ್‌ನಲ್ಲಿ ಪವಿತ್ರ ನೀರನ್ನು ಸುರಿಯಲಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ.

