ಪುಣೆ: ನಿಶ್ಚಿತ ವಧುವಿನೊಂದಿಗೆ ಲೋಹಗಡ್ ಕೋಟೆಗೆ ಟ್ರೆಕಿಂಗ್ ಗೆ ತೆರಳಿದ್ದ ಪುಣೆಯ 26 ವರ್ಷದ ಯುವಕ 400 ಅಡಿ ಆಳದ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.

ಗಹುಂಜೆ ನಿವಾಸಿ, ರಿಯಲ್ ಎಸ್ಟೇಟ್ ವ್ಯವಹಾರದ ನಿರ್ದೇಶಕರಾದ ಕೇತನ್ ವಿಶಾಲ್ ಅಗರ್ವಾಲ್ ಗುರುವಾರ(ಜೂ18) ತಮ್ಮ ನಿಶ್ಚಿತ ವಧು ಮತ್ತು ಇಬ್ಬರು ಸ್ನೇಹಿತರೊಂದಿಗೆ ಮಾವಲ್ ತಹಸಿಲ್‌ನಲ್ಲಿರುವ ಸುಂದರವಾದ ಬೆಟ್ಟದ ಕೋಟೆಗೆ ಪ್ರಯಾಣ ಬೆಳೆಸಿದ್ದರು. ಈ ಪ್ರವಾಸವು ಕೇತನ್ ಹುಟ್ಟುಹಬ್ಬದ ಮುನ್ನಾದಿನ ಕೈಗೊಳ್ಳಲಾಗಿತ್ತು.

ಪೊಲೀಸರ ಪ್ರಕಾರ, ಬೆಳಗ್ಗೆ 10:30 ರ ಸುಮಾರಿಗೆ, ಬಂಡೆಯ ಅಂಚಿನ ಬಳಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದಾಗ ಬಲವಾದ ಗಾಳಿ ಬೀಸಿದಾಗ ಕೇತನ್ ಇದ್ದಕ್ಕಿದ್ದಂತೆ ತನ್ನ ನಿಯಂತ್ರಣ ಕಳೆದುಕೊಂಡರು. ಸುಮಾರು 400 ಅಡಿಗಳಷ್ಟು ಆಳವಾದ ಕಮರಿಗೆ ಜಾರಿಬಿದ್ದು ಪ್ರಾಣ ಬಿಟ್ಟಿದ್ದಾರೆ.

ವಿಷಯ ತಿಳಿದ ಕೊಡಲೇ ಪೊಲೀಸರು ಮತ್ತು ಶಿವದುರ್ಗ ಮಿತ್ರ ತುರ್ತು ರಕ್ಷಣಾ ತಂಡದ ಸದಸ್ಯರು ಸವಾಲಿನ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಕಡಿದಾದ ಭೂಪ್ರದೇಶ ಮತ್ತು ದಟ್ಟವಾದ ಗಿಡ ಮರಗಳ ನಡುವೆ ರಕ್ಷಣಾ ತಂಡವು ಸುಮಾರು ಮೂರು ಗಂಟೆಗಳ ಕಾಲ ಹರಸಾಹಸ ಪಟ್ಟು ಯುವಕನ ಮೃತ ದೇಹವನ್ನು ಕಣಿವೆಯಿಂದ ಹೊರತಂದಿದ್ದಾರೆ.

ಮದುವೆ ನವೆಂಬರ್‌ನಲ್ಲಿ ನಿಗದಿಯಾಗಿತ್ತು, ಮತ್ತು ಎರಡೂ ಕುಟುಂಬಗಳು ಈಗಾಗಲೇ ಸಮಾರಂಭಕ್ಕಾಗಿ ಉದಯಪುರದಲ್ಲಿ ಅರಮನೆಯನ್ನು ಕಾಯ್ದಿರಿಸುವುದು ಸೇರಿದಂತೆ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದವು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಆಕಸ್ಮಿಕ ಸಾವು ಎಂದು ವರದಿ ದಾಖಲಿಸಿಕೊಂಡಿದ್ದು, ಘಟನೆಯ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.