ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದ ಗಂಗಾ ಬ್ಯಾರೇಜ್ ಬಳಿ ತರಬೇತಿ ವಿಮಾನವೊಂದು ಪತನಗೊಂಡಿದ್ದು, ಕರ್ನಾಟಕ ಮೂಲದ ಪೈಲಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಆಯುಕ್ತ ರಘುವೀರ್ ಲಾಲ್ ದೃಢಪಡಿಸಿದ್ದಾರೆ.
ಕಾನ್ಪುರದ ನತ್ತಾ ಪುರ್ವಾ ಗ್ರಾಮದ ವ್ಯಾಪ್ತಿಯಲ್ಲಿರುವ ಗಂಗಾ ಬ್ಯಾರೇಜ್ ಬಳಿ ಈ ಅಪಘಾತ ಸಂಭವಿಸಿದ್ದು, ತರಬೇತುದಾರರಾಗಿರುವ ಗುಜರಾತ್ ಮೂಲದ ಸಚಿನ್ ಭಾಟಿಯಾ ಮತ್ತು ತರಬೇತಿ ಪಡೆಯುತ್ತಿದ್ದ ಕರ್ನಾಟಕದ ಅಭಿಷೇಕ್ ಪೂಜಾರಿ ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಪೊಲೀಸ್ ಆಯುಕ್ತ ರಘುವೀರ್ ಲಾಲ್, ಜೆಸಿಪಿ ಸಂಕಲ್ಪ್ ಶರ್ಮಾ ಮತ್ತು ಕೇಂದ್ರ ಡಿಸಿಪಿ ಅತುಲ್ ಶ್ರೀವಾಸ್ತವ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು.
ಪೊಲೀಸ್ ಆಯುಕ್ತ ರಘುವೀರ್ ಲಾಲ್ ಮಾತನಾಡಿ, ಇಂದು ಬೆಳಗ್ಗೆ ಸುಮಾರು 11.30ರ ಸುಮಾರಿಗೆ ವಿಮಾನ ಪತನಗೊಂಡಿರುವ ಸುದ್ದಿ ಲಭ್ಯವಾಯಿತು. ನಾಲ್ಕು ಆಸನಗಳ ವಿಮಾನ ಇದಾಗಿದ್ದು, ಇಬ್ಬರು ಸಿಬ್ಬಂದಿ ಗಾರ್ಗ್ ಏವಿಯೇಷನ್ ಟ್ರೈನಿಂಗ್ ಸೆಂಟರ್ನಿಂದ ಟೆಕ್ನಾಮ್ ವಿಮಾನದಲ್ಲಿ ಹಾರಾಟ ಆರಂಭಿಸಿದ್ದರು. ಇವರಿಬ್ಬರೂ ಒಟ್ಟಾರೆಯಾಗಿ 3,000 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ವಿಮಾನ ಪತನಕ್ಕೆ ಕಾರಣ ಏನು ಎಂಬ ಬಗ್ಗೆ ಹೆಚ್ಚಿನ ತಾಂತ್ರಿಕ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.

