ಆಂಧ್ರಪ್ರದೇಶ: ಏಲೂರು ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಭೀಕರ ರೈಲು ಅಪಘಾತವೊಂದು ಸಂಭವಿಸಿದೆ. ಉಂಗುಟೂರು ಮಂಡಲದ ಚೇಬ್ರೋಲು ರೈಲ್ವೆ ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದಂತೆ ಒಟ್ಟು ನಾಲ್ಕು ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆಯು ಸ್ಥಳೀಯವಾಗಿ ತೀವ್ರ ಆಘಾತವನ್ನುಂಟು ಮಾಡಿದೆ.

ರೈಲ್ವೆ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೃತಪಟ್ಟ ನಾಲ್ಕೂ ಜನರಿಗೆ ಚೆರ್ಲಪಲ್ಲಿ–ಶಾಲಿಮಾರ್ ಸ್ಪೆಷಲ್ ಟ್ರೈನ್ (ರೈಲು ಸಂಖ್ಯೆ: 08046) ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ರೈಲು ಹರಿದ ಪರಿಣಾಮ ದೇಹಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಯಾರೊಬ್ಬರೂ ಬದುಕುಳಿದಿಲ್ಲ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ತಾಡೇಪಲ್ಲಿಗುಡೆಮ್ ಸರ್ಕಾರಿ ರೈಲ್ವೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ರೈಲ್ವೆ ಹಳಿಯ ಬಳಿ ನಾಲ್ಕು ಮಂದಿ ಒಟ್ಟಿಗೇ ಸಾವನ್ನಪ್ಪಿರುವುದನ್ನು ಕಂಡು ಪೊಲೀಸರು ತೀವ್ರ ದಿಗ್ಭ್ರಮೆಗೊಂಡಿದ್ದಾರೆ. ಪ್ರಾಥಮಿಕ ತನಿಖೆಯನ್ನು ನಡೆಸಿರುವ ರೈಲ್ವೆ ಪೊಲೀಸರು, ಮೇಲ್ನೋಟಕ್ಕೆ ಇದು ಆಕಸ್ಮಿಕ ಅಪಘಾತವಾಗಿರದೆ, ನಾಲ್ಕೂ ಜನ ಒಟ್ಟಾಗಿ ಮಾಡಿಕೊಂಡಿರುವ ಸಾಮೂಹಿಕ ಆತ್ಮಹತ್ಯೆಯ ಪ್ರಕರಣ ಇರಬಹುದು ಎಂದು ಬಲವಾಗಿ ಶಂಕಿಸಿದ್ದಾರೆ.

ಮೃತರ ಗುರುತು ಪತ್ತೆ ಹಚ್ಚಲು ಪೊಲೀಸರು ಸ್ಥಳದಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮೃತಪಟ್ಟ ಒಬ್ಬ ಮಹಿಳೆಯ ಬಳಿ ‘ಶೇಕ್ ಹಸೀನಾ’ ಎಂಬ ಹೆಸರಿನ ಎಟಿಎಂ (ATM) ಕಾರ್ಡ್ ಪತ್ತೆಯಾಗಿದೆ. ಇದರೊಂದಿಗೆ ಮತ್ತೊಬ್ಬ ಮೃತನ ಜೇಬಿನಲ್ಲಿ ತಾಡೇಪಲ್ಲಿಗುಡೆಮ್ ಆರ್​​ಟಿಸಿ (RTC) ಡಿಪೋಗೆ ಸೇರಿದ ಪಾರ್ಕಿಂಗ್ ರಸೀದಿ ಹಾಗೂ ಸಂಪೂರ್ಣ ಜಜ್ಜುಗುಜ್ಜಾಗಿರುವ ಎರಡು ಮೊಬೈಲ್ ಫೋನ್‌ಗಳು ಪೊಲೀಸರಿಗೆ ಸಿಕ್ಕಿವೆ.

ಸದ್ಯಕ್ಕೆ ಮೃತಪಟ್ಟವರ ಪೂರ್ಣ ವಿವರಗಳು ಲಭ್ಯವಾಗಿಲ್ಲ. ಈ ಸಂಬಂಧ ತಾಡೇಪಲ್ಲಿಗುಡೆಮ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ನಿಖರವಾದ ಗುರುತು ಯಾರು ಮತ್ತು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಅಸಲಿ ಕಾರಣ ಏನಿರಬಹುದು ಎಂಬ ಸತ್ಯಾಸತ್ಯತೆಯನ್ನು ಹೊರತರಲು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.