ಅಹಮದಾಬಾದ್: ಗುಜರಾತ್‌ನ ಕೆಲವೆಡೆ ಸತತ ನಾಲ್ಕನೇ ದಿನ ಬುಧವಾರವೂ ಧಾರಾಕಾರ ಮಳೆಯಾಗಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ ಮೂರು ದಿನದಲ್ಲಿ 26ಕ್ಕೆ ಏರಿದೆ.

ಸುಮಾರು 17,800 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಎಸ್‌ಡಿಆರ್‌ಎಫ್, ಸೇನೆ, ಕರಾವಳಿ ಕಾವಲು ಪಡೆಗಳನ್ನು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಂದ ಪರಿಸ್ಥಿತಿಯ ಮಾಹಿತಿ ಪಡೆದರು.

ಸೌರಾಷ್ಟ್ರ ವಲಯದಲ್ಲಿ ದೇವ್‌ಭೂಮಿ ದ್ವಾರಕಾ, ಜಾಮ್‌ನಗರ, ಪೋರಬಂದರ್ ಸೇರಿ ಹಲವು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದೆ. ಜಾಮ್‌ನಗರದಲ್ಲಿ 38.7 ಸೆಂ.ಮೀ. ಮಳೆ ಸುರಿದೆ. 13 ತಾಲ್ಲೂಕುಗಳಲ್ಲಿ 20 ಸೆಂ.ಮೀಗೂ ಹೆಚ್ಚು ಮಳೆಯಾಗಿದೆ. ರಾಜ್ಯದಲ್ಲಿ 137 ಜಲಾಶಯಗಳು, ಕೆರೆಗಳು, 24 ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಭಾರಿ ಮಳೆ ಹಿನ್ನೆಲೆಯಲ್ಲಿ ವಂದೇಭಾರತ್ ಸೇರಿದಂತೆ 10 ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ. ಹವಾಮಾನ ಇಲಾಖೆ ಪ್ರಕಾರ, ಗುಜರಾತ್‌ನಲ್ಲಿ ವಾರ್ಷಿಕ ವಾಡಿಕೆ ಮಳೆಗಿಂತ ಶೇ 105ರಷ್ಟು ಮಳೆ ಹೆಚ್ಚು ಸುರಿದಿದೆ. ವಡೋದರಾ ನಗರದಲ್ಲಿ ಹಲವು ಭಾಗಗಳು ಜಲಾವೃತಗೊಂಡಿವೆ. ರಕ್ಷಣೆಗೆ ಸೇನೆಯ ನೆರವು ಪಡೆಯಲಾಗಿದೆ. ಕೆಲವೆಡೆ 10ರಿಂದ 12 ಅಡಿಯಷ್ಟು ನೀರು ನಿಂತಿದೆ ಎಂದು ಆರೋಗ್ಯ ಸಚಿವ ಹೃಷಿಕೇಶ್ ಪಟೇಲ್ ಹೇಳಿದ್ದಾರೆ. ಅಜ್ವಾ ಅಣೆಕಟ್ಟಿನಿಂದ ನೀರು ಬಿಟ್ಟಿರುವ ಕಾರಣ ವಿಶ್ವಾಮಿತ್ರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮುಂಜಾಗ್ರತೆಯಾಗಿ ಜಿಲ್ಲಾಡಳಿತ ಶಾಲೆಗಳಿಗೆ ರಜೆ ಘೋಷಿಸಿದೆ.