ಉತ್ತರ ಪ್ರದೇಶ : ಕರ್ತವ್ಯಕ್ಕೆ ಮರಳುತ್ತಿದ್ದ ಯೋಧನನ್ನ ಟೋಲ್ ಪ್ಲಾಜಾ ಸಿಬ್ಬಂದಿ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಗಾಯಗೊಂಡ ಯೋಧನನ್ನು ಕಪಿಲ್ ಕವಾಡ್ ಎಂದು ಗುರುತಿಸಲಾಗಿದೆ. ಭಾರತೀಯ ಸೇನೆಯ ರಜಪೂತ ರೆಜಿಮೆಂಟ್‌ನಲ್ಲಿದ್ದ ಕಾರ್ಯನಿರ್ವಹಿಸುತ್ತಿದ್ದ ಕಪಿಲ್ ಕವಾಡ್ ರಜೆಯ ಹಿನ್ನಲೆ ಮನೆಗೆ ತೆರಳಿದ್ದರು.
ಶ್ರೀನಗರದಲ್ಲಿರುವ ತಮ್ಮ ಕರ್ತವ್ಯದ ಸ್ಥಳಕ್ಕೆ ಮರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಟೋಲ್ ಬೂತ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಮೊದಲೇ ವಿಮಾನಕ್ಕೆ ತಡವಾದ್ದರಿಂದ ಆತಂಕಗೊಂಡ ಯೋಧ ಕಪಿಲ್ ಇನ್ನಷ್ಟು ಹೊತ್ತು ಕಾದರೆ ವಿಮಾನ ಸಿಗುವುದಿಲ್ಲ ಎಂದು ಹೇಳಿ ಕಾರಿನಿಂದ ಇಳಿದಿದ್ದಾರೆ.
ಕಾರಿನಿಂದ ಇಳಿದು ನೇರವಾಗಿ ಟೋಲ್ ಬೂತ್ ಸಿಬ್ಬಂದಿಯೊಂದಿಗೆ ಬೇಗ ಬಿಡುವಂತೆ ಮನವಿ ಮಾಡಿದ್ದಾರೆ. ಇದರಿಂದ ಸಿಟ್ಟಾದ ಟೋಲ್ ಪ್ಲಾಜಾದ ಐವರು ಸಿಬ್ಬಂದಿ ಕಪಿಲ್ ಮತ್ತು ಅವರ ಸೋದರ ಸಂಬಂಧಿಯನ್ನ ಮನಬಂದಂತೆ ಥಳಿಸಿದ್ದಾರೆ.
ಅಷ್ಟೇ ಅಲ್ಲದೆ, ಕಪಿಲ್‌ಗೆ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿ ಕೂಡ ಹಲ್ಲೆ ನಡೆಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇನ್ನು ಘಟನೆಗೆ ಸಂಬಂಧಪಟ್ಟಂತೆ ಕಪಿಲ್ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಸರೂರ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ನಾಲ್ವರು ಪ್ರಮುಖ ಶಂಕಿತರನ್ನು ಬಂಧಿಸಲಾಗಿದೆ. ಇನ್ನೊಬ್ಬರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನು ಈ ಹಿಂದೆ ಸಿಆರ್‌ಪಿಎಫ್ ಜವಾನ ಗೌತಮ್ ಮಿರ್ಜಾಪುರದಿಂದ ಮಣಿಪುರಕ್ಕೆ ತೆರಳಲು ಬ್ರಹ್ಮಪುತ್ರ ರೈಲಿಗಾಗಿ ಕಾಯುತ್ತಿದ್ದರು. ಈ ಸಮಯದಲ್ಲಿ, ಪ್ಲಾಟ್‌ಫಾರ್ಮ್‌ಗೆ ಬಂದ ಕೆಲವು ಕನ್ವಾರಿಯರೊಂದಿಗೆ ಅವರು ವಾಗ್ವಾದ ನಡೆಸಿದರು. ಇದಾದ ಬಳಿಕ ಕನ್ವಾರಿಯರು ಜವಾನ ಗೌತಮ್‌ನನ್ನು ಬೆನ್ನಟ್ಟಿ ನೆಲಕ್ಕೆ ಎಸೆದು ಕಾಲಿನಿಂದ ಒದ್ದು, ಮನಬಂದಂತೆ ಥಳಿಸಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕೇಸರಿ ಬಟ್ಟೆ ಧರಿಸಿದ ಕನ್ವಾರಿಯರ ಗುಂಪೊಂದು CRPF ಸಿಬ್ಬಂದಿಯ ಮೇಲೆ ದಾಳಿ ಮಾಡಿ ಥಳಿಸುತ್ತಿರುವುದು ಕಂಡುಬಂದಿದೆ. ಗಲಾಟೆಯ ದೃಶ್ಯಗಳನ್ನು ರೈಲ್ವೆ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ನೋಡುತ್ತಾ ನಿಂತಿದ್ದರೆ ಹೊರತು ಜನರಾಗಲಿ ಅಥವಾ ಭದ್ರತಾ ಸಿಬ್ಬಂದಿಯಾಗಲಿ ಯಾರೂ ಅವರನ್ನು ರಕ್ಷಿಸುವ ಪ್ರಯತ್ನ ಮಾಡಲಿಲ್ಲ.
ಮಿರ್ಜಾಪುರ ರೈಲು ನಿಲ್ದಾಣದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಜವಾನನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 7 ಮಂದಿ ಕನ್ವಾರಿಯರನ್ನು ಬಂಧಿಸಲಾಗಿದೆ.

