ಹೊಸದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮುಂಡ್ಕಾ ಕೈಗಾರಿಕಾ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಭೀಕರ ದುರಂತವೊಂದು ಸಂಭವಿಸಿದೆ. ಇಲ್ಲಿನ ಫ್ಯಾಕ್ಟರಿಯೊಂದರ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರು ವಿಷಾನಿಲ ಸೇವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ಸುಲ್ತಾನ್‌ಪುರಿಯ ಇಂದ್ರಾ ಜೀಲ್ ಪ್ರದೇಶದ ನಿವಾಸಿಗಳಾದ ಅರುಣ್ (38), ಸಂದೀಪ್ (32) ಮತ್ತು ಚಂದ್ (42) ಎಂದು ಗುರುತಿಸಲಾಗಿದೆ. ಮುಂಡ್ಕಾದ ಜ್ವಾಲಾಪುರಿ ಪ್ರದೇಶದಲ್ಲಿರುವ ಕಾರ್ಖಾನೆ ಸಂಖ್ಯೆ 93/8 ರಲ್ಲಿ ಈ ಘಟನೆ ನಡೆದಿದೆ.

ಟ್ಯಾಂಕ್ ಸ್ವಚ್ಛಗೊಳಿಸಲು ಮೊದಲಿಗೆ ಒಬ್ಬ ಕಾರ್ಮಿಕ ಒಳಗಿಳಿದಿದ್ದು, ಆತ ವಿಷಾನಿಲದ ಪ್ರಭಾವದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಉಳಿದ ಇಬ್ಬರು ಕಾರ್ಮಿಕರು ಒಬ್ಬರ ಹಿಂದೆ ಒಬ್ಬರಂತೆ ಸೆಪ್ಟಿಕ್ ಟ್ಯಾಂಕ್‌ಗೆ ಇಳಿದಾಗ ವಿಷಕಾರಿ ಹೊಗೆಯನ್ನು ಸೇವಿಸಿ ಮೂವರೂ ಟ್ಯಾಂಕ್ ಒಳಗಡೆಯೇ ಅಸುನೀಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮಧ್ಯಾಹ್ನ ಕಾರ್ಖಾನೆಯ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಕಾರ್ಮಿಕರು ಸಿಲುಕಿರುವ ಬಗ್ಗೆ ದೆಹಲಿ ಅಗ್ನಿಶಾಮಕ ದಳಕ್ಕೆ ತುರ್ತು ಕರೆ ಬಂದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಎರಡು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಿದ್ದರು. ಆದರೆ ಮಾರ್ಗಮಧ್ಯೆ ಭೀಕರ ಸಂಚಾರ ದಟ್ಟಣೆ ಉಂಟಾದ ಕಾರಣ ರಕ್ಷಣಾ ಕಾರ್ಯಾಚರಣೆ ತಡವಾಗುವ ಸಾಧ್ಯತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲು ತಿಕ್ರಿ ಮಾರ್ಗವಾಗಿ ವಿರುದ್ಧ ದಿಕ್ಕಿನಿಂದ ಮತ್ತೊಂದು ಅಗ್ನಿಶಾಮಕ ವಾಹನವನ್ನು ತರಾತುರಿಯಲ್ಲಿ ಸ್ಥಳಕ್ಕೆ ಕಳುಹಿಸಿಕೊಡಲಾಯಿತು.

ಘಟನಾ ಸ್ಥಳಕ್ಕೆ ಮುಂಡ್ಕಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿ ಹಗ್ಗಗಳ ಸಹಾಯದಿಂದ ಮೂವರನ್ನು ಹೊರಗೆ ತೆಗೆದರಾದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡ್ಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನಿಖೆ ಆರಂಭವಾಗಿದ್ದು, ಕಾರ್ಖಾನೆಯ ಆಡಳಿತ ಮಂಡಳಿಯು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದೆಯೇ ಮತ್ತು ಈ ಘಟನೆಯಲ್ಲಿ ಯಾರದ್ದಾದರೂ ನಿರ್ಲಕ್ಷ್ಯವಿದೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.