ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಏಳನೇ ಬಾರಿಗೆ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. ಬಜೆಟ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದು, “ದೇಶದ ಸರ್ವಾಂಗೀಣ ಏಳಿಗೆಗೆ ಈ ಬಜೆಟ್ ಏಣಿಯಾಗಿದೆ” ಎಂಬುದಾಗಿ ವಿಡಿಯೋ ಸಂದೇಶದ ಮೂಲಕ ಬಣ್ಣಿಸಿದ್ದಾರೆ.
“ದೇಶದ ಎಲ್ಲ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಯುವಕರಿಗೆ ಉದ್ಯೋಗ, ಬಡವರಿಗೆ ಮನೆ ನಿರ್ಮಾಣ, ಸಣ್ಣ ಉದ್ಯಮಗಳು, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ.
ಭಾರತವು ಮೂಲ ಸೌಕರ್ಯ ಉತ್ಪಾದಿಸುವಲ್ಲಿ ಜಾಗತಿಕ ಮಳಿಗೆಯಾಗುತ್ತದೆ. ಭಾರತದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ. ಅಷ್ಟರಮಟ್ಟಿಗೆ, ಪ್ರಸಕ್ತ ಸಾಲಿನ ಮುಂಗಡಪತ್ರವು ದೇಶದ ಏಳಿಗೆಯನ್ನು ಪ್ರತಿನಿಧಿಸುತ್ತದೆ” ಎಂಬುದಾಗಿ ಹೇಳಿದ್ದಾರೆ.
ಶಿಕ್ಷಣ ಹಾಗೂ ಕೌಶಲ್ಯ ವೃದ್ಧಿಯ ದೃಷ್ಟಿಯಿಂದಲೂ ಬಜೆಟ್ ಪ್ರಮುಖವಾಗಿದೆ. ಶಿಕ್ಷಣ ಹಾಗೂ ಕೌಶಲಾಭಿವೃದ್ಧಿಯಿಂದ ಮಧ್ಯಮ ವರ್ಗದ ಜನರಿಗೆ ಭಾರಿ ಅನುಕೂಲವಾಗಲಿದೆ. ಅವರಿಗೆ ಹೊಸ ಶಕ್ತಿಯೇ ಸಿಗಲಿದೆ. ದಲಿತರು ಹಾಗೂ ಬುಡಕಟ್ಟು ಸಮುದಾಯದವರಿಗೂ ಇದರಿಂದ ಸಹಕಾರಿಯಾಗಲಿದೆ. ಹಣಕಾಸು ನೆರವು ಕೂಡ ಸಿಗುವುದರಿಂದ ದಮನಿತರು ಏಳಿಗೆಯ ಹಾದಿ ಹಿಡಿಯಲು ಸಾಧ್ಯವಾಗಲಿದೆ” ಎಂದು ತಿಳಿಸಿದರು.

