ನವದೆಹಲಿ: ಪೊಲೀಸ್ ಹುತಾತ್ಮರ ದಿನಾಚರಣೆ ಪ್ರಯುಕ್ತ ಕರ್ತವ್ಯದಲ್ಲಿರುವಾಗ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.

ಅತ್ಯಂತ ಸವಾಲಿನ ಪರಿಸ್ಥಿತಿಗಳಲ್ಲಿಯೂ ಬದ್ಧತೆಯಿಂದ ಸೇವೆ ಸಲ್ಲಿಸುವ ಪೊಲೀಸ್ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲು ಇದೊಂದು ಸೂಕ್ತ ಸಂದರ್ಭ ಎಂದು ಅವರು ಹೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರಿಂದ ಹಿಡಿದು ಅಪರಾಧಗಳನ್ನು ತಡೆಯುವವರೆಗೆ, ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವುದರಿಂದ ಹಿಡಿದು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವವರೆಗೆ ಪೊಲೀಸರ ಕೊಡುಗೆ ಅಮೂಲ್ಯವಾದುದು ಎಂದು ಮೋದಿ ಸ್ಮರಿಸಿದ್ದಾರೆ.

ಪೊಲೀಸ್ ಸಿಬ್ಬಂದಿಯ ಧೈರ್ಯ, ಸಮರ್ಪಣಾ ಭಾವ ಮತ್ತು ಪರಮ ತ್ಯಾಗವು ದೇಶದ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂದು ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

1959ರ ಅಕ್ಟೋಬರ್ 21ರಂದು ಲಡಾಖ್‌ನ ‘ಹಾಟ್ ಸ್ಪ್ರಿಂಗ್’ ಪ್ರದೇಶದಲ್ಲಿ ಚೀನೀ ಪಡೆಗಳ ನಡೆಸಿದ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಿಬ್ಬಂದಿ ಹುತಾತ್ಮರಾಗಿದ್ದರು. ಸಿಬ್ಬಂದಿಯ ಸ್ಮರಣಾರ್ಥವಾಗಿ ‘ರಾಷ್ಟ್ರೀಯ ಪೊಲೀಸ್ ಹುತಾತ್ಮರ ದಿನ’ವನ್ನು ಆಚರಿಸಲಾಗುತ್ತದೆ.

ಪೊಲೀಸರ ಕರ್ತವ್ಯ ನಿಷ್ಠೆ ಮತ್ತು ಪ್ರಾಣತ್ಯಾಗದ ಸ್ಮರಣಾರ್ಥ ದೆಹಲಿಯಲ್ಲಿ ಐತಿಹಾಸಿಕ ಸ್ಮಾರಕ, ವಸ್ತುಸಂಗ್ರಹಾಲಯ ನಿರ್ಮಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೌರವ ನಮನ ಸಲ್ಲಿಸಿದ್ದಾರೆ.