ಚೆನ್ನೈ: ಶಾಲಾ ಬಸ್ ಚಾಲಕನೊಬ್ಬ ಶಾಲಾ ವಿದ್ಯಾರ್ಥಿಗಳನ್ನು ರಕ್ಷಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ತಿರುಪ್ಪೂರಿನಲ್ಲಿ ನಡೆದಿದೆ.
ಅದಕ್ಕೆ ಸಂಬಂಧಪಟ್ಟ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ತಿರುಪುರ್ ಜಿಲ್ಲೆಯ ಗಂಗೇಯಂ ನಿವಾಸಿ ಮಲಯಪ್ಪನ್ ಖಾಸಗಿ ಶಾಲಾ ಬಸ್ ಚಾಲನೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು.
ಅವರ ಸಾಯುವ ಸ್ಥಿತಿಯಲ್ಲಿದ್ದರೂ ಕೂಡ ಮಕ್ಕಳಿಗೆ ಯಾವುದೇ ಹಾನಿಯಾಗಬಾರದೆಂದು ಅವರು ವಾಹನವನ್ನು ರಸ್ತೆಯ ಬದಿಗೆ ತಂದು ನಿಲ್ಲಿಸಿ ತಮ್ಮ ಪ್ರಾಣಬಿಟ್ಟಿದ್ದಾರೆ. ಶಾಲಾ ಬಸ್ ಚಾಲಕನ ಈ ನಿಸ್ವಾರ್ಥ ಕಾರ್ಯವು ಅನೇಕ ವಿದ್ಯಾರ್ಥಿಗಳ ಜೀವವನ್ನು ಉಳಿಸಿತು.
ಮಲಯಪ್ಪನ್ ಅವರನ್ನು ಆಸ್ಪತ್ರೆ ಕರೆದುಕೊಂಡು ಹೋದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂಬುದಾಗಿ ತಿಳಿದುಬಂದಿದೆ. ಮೃತ ವ್ಯಕ್ತಿ ವೆಲ್ಲಕೋಯಿಲ್‌ನ ಎಎನ್‍ವಿ ಮೆಟ್ರಿಕ್ ಶಾಲೆಯಲ್ಲಿ ಶಾಲಾ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು .
ಈ ಬಸ್ ಚಾಲಕನ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದು, ‘ಸಾವಿನ ಅಂಚಿನಲ್ಲಿದ್ದರೂ ಅವರು ಮಕ್ಕಳ ಜೀವವನ್ನು ಉಳಿಸಿದ್ದಾರೆ ಎಂದು ಹೊಗಳಿದ್ದಾರೆ.

