ನವದೆಹಲಿ: ದೇಶದಲ್ಲಿ ಹೆಚ್ಚಿನ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೃಷ್ಟಿಸುತ್ತಿರುವುದರಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವಾಗ್ದಾಳಿಗೆ ತಿರುಗೇಟು ನೀಡಿದ ಅವರು, 1948ರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್ ಅನ್ನು ಟೀಕಿಸಿದ ಸರ್ದಾರ್ ಪಟೇಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿದರು.
ದೇಶದಲ್ಲಿನ ಹೆಚ್ಚಿನ ಸಮಸ್ಯೆಗಳು ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಬಿಜೆಪಿ-ಆರ್‌ಎಸ್‌ಎಸ್‌ಗೆ ಸಂಬಂಧಿಸಿವೆ. ಹಾಗಾಗಿ ಆರ್‌ಎಸ್‌ಎಸ್ ಅನ್ನು ನಿಷೇಧಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.
ಸರ್ದಾರ್ ಪಟೇಲ್ ಅವರು ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ ಖರ್ಗೆ, ಮಹಾತ್ಮಾ ಗಾಂಧಿಯವರ ಹತ್ಯೆಯ ದುರಂತದ ವಾತಾವರಣವನ್ನು ಆರ್‌ಎಸ್‌ಎಸ್ ಸೃಷ್ಟಿಸಿದೆ ಎಂದು ಗೃಹ ಸಚಿವರಾಗಿದ್ದ ಪಟೇಲ್ ಹೇಳಿದ್ದರು. ಪಟೇಲ್ ಮತ್ತು ನೆಹರು ಪರಸ್ಪರ ಅಪಾರ ಗೌರವ ಹೊಂದಿದ್ದರು.
ಬಿಜೆಪಿ ಯಾವಾಗಲೂ ನೆಹರು ಮತ್ತು ಪಟೇಲ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಬಿಂಬಿಸಲು ಪ್ರಯತ್ನಿಸುತ್ತದೆ. ಆದರೆ ವಾಸ್ತವದಲ್ಲಿ ಅವರಿಗೆ ಪರಸ್ಪರ ಅಪಾರ ಗೌರವವಿತ್ತು. ರಾಷ್ಟ್ರೀಯ ಏಕತೆಯನ್ನು ಸ್ಥಾಪಿಸುವಲ್ಲಿ ಪಟೇಲ್ ಅವರ ಪಾತ್ರವನ್ನು ನೆಹರು ಶ್ಲಾಘಿಸಿದರು ಮತ್ತು ಪಟೇಲ್ ನೆಹರು ಅವರನ್ನು ಆದರ್ಶ ನಾಯಕ ಎಂದು ಬಣ್ಣಿಸಿದರು.

