ಶ್ರೀನಗರ: ಜಮ್ಮು ಕಾಶ್ಮೀರದ ದೋಡಾದ ಸೇನಾ ನೆಲೆಯ ಮೇಲೆ ಮಂಗಳವಾರ ತಡರಾತ್ರಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಪ್ರಸ್ತುತ ಉಗ್ರಗಾಮಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭಿಕ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕಥುವಾ ಜಿಲ್ಲೆಯಲ್ಲಿ ಮಂಗಳವಾರ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಸೇನಾ ನೆಲೆಯ ಮೇಲೆ ಈ ದಾಳಿ ನಡೆದಿದೆ. ಮೂರು ದಿನಗಳ ಹಿಂದೆ ಭಯೋತ್ಪಾದಕರು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆಸಿದ್ದ ಕಾರಣ ಬಸ್ ಕಮರಿಗೆ ಬಿದ್ದು ಒಂಬತ್ತು ಪ್ರಯಾಣಿಕರು ಮೃತಪಟ್ಟಿದ್ದರು.
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಮನೆಯೊಂದಕ್ಕೆ ನುಗ್ಗಿದ್ದ ಉಗ್ರರ ಗುಂಪಿನಲ್ಲಿ ಒಬ್ಬನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದೆ. ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಿ ಅವರಲ್ಲೊಬ್ಬರನ್ನು ಹೊಡೆದುರುಳಿಸಿದ್ದಾರೆ.
ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಘಟನೆ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಘಟನೆ ಬಗ್ಗೆ ಕಥುವಾ ಜಿಲ್ಲಾಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.

