ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಹಳ್ಳಿಯೊಂದರ ಸೇನಾ ಶಿಬಿರದ ಮೇಲೆ ಇಂದು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಓರ್ವ ಯೋಧ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಜಕೋಟೆ ಪ್ರದೇಶದ ಗಲೂತಿ ಗ್ರಾಮದ ಟೆರಿಟೋರಿಯಲ್ ಆರ್ಮಿಯ ಸೆಂಟ್ರಿ ಪೋಸ್ಟ್ ಮೇಲೆ ಬೆಳಗ್ಗೆ 4 ಗಂಟೆ ಸುಮಾರಿಗೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಓರ್ವ ಯೋಧ ಗಾಯಗೊಂಡಿದ್ದು, ನಂತರ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಪ್ರತಿದಾಳಿ ನಡೆಸಿದ ಸೈನಿಕರು ದಾಳಿಯನ್ನು ವಿಫಲಗೊಳಿಸಿದ್ದು, ಉಗ್ರರು ಪಲಾಯನಗೈದಿದ್ದಾರೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ.
ಎರಡು ಕಡೆಯವರ ನಡುವೆ 30 ನಿಮಿಷಗಳ ಕಾಲ ಗುಂಡಿನ ಚಕಮಕಿ ಮುಂದುವರೆದಿದೆ ಆದರೆ ಭಯೋತ್ಪಾದಕರು ಹತ್ತಿರದ ಅರಣ್ಯಕ್ಕೆ ಹೋಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ದಾಳಿಕೋರರನ್ನು ಪತ್ತೆಹಚ್ಚಲು ಸೇನೆ ಮತ್ತು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

