ನವದೆಹಲಿ: ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣದಿಂದ ನೂರಕ್ಕೂ ಹೆಚ್ಚು ವಿಮಾನಗಳು ವಿಳಂಬ ಆಗಿರುವ ಘಟನೆ ದೆಹಲಿಯಲ್ಲಿ ಶುಕ್ರವಾರ ನಡೆದಿದೆ.
ಶುಕ್ರವಾರ ಬೆಳಗ್ಗೆ ಸುಮಾರು 9 ಗಂಟೆಯಿಂದ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಆಗಿದೆ. ಈ ಕಾರಣದಿಂದ ಉತ್ತರ ಭಾರತದಾದ್ಯಂತ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಅನೇಕ ಜನರು ಪರದಾಡಿದ್ದಾರೆ. ಸರ್ವರ್ ಸಮಸ್ಯೆ ಬೆಳಗ್ಗೆಯಿಂದ ಕಾಣಿಸಿದ ಕಾರಣದಿಂದ ತೊಂದರೆ ಆಗಿದ್ದು, ವಿಮಾನ ನಿಯಂತ್ರಣಾಧಿಕಾರಿಗಳು ವಿಮಾನಗಳ ನಿರ್ಗಮನ ಮತ್ತು ಆಗಮನವನ್ನು ನಿರ್ವಹಣೆ ಮಾಡಿದ್ದು, ಈ ಸಮಸ್ಯೆಗೆ ಯಾವಾಗ ಪರಿಹಾರ ಸಿಗುತ್ತದೆ ಎನ್ನುವ ಮಾಹಿತಿ ಇಲ್ಲ.
ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಯಂಚಾಲಿತ ಸಂದೇಶ ವಿನಿಮಯ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಈ ಕಾರಣದಿಂದ ವಿಮಾನಗಳು ತುಂಬಾ ವಿಳಂಬ ಆಗಿದೆ. ಈ ವ್ಯವಸ್ಥೆ ಇದ್ದರೆ ವಿಮಾನ ನಿಯಂತ್ರಣಾಧಿಕಾರಿಗಳ ದತ್ತಾಂಶ ಪಡೆಯಲು ಸಹಾಯ ಮಾಡುತ್ತದೆ.
ಆದರೆ ಇದರಲ್ಲಿಯೇ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಿಮಾನ ನಿಯಂತ್ರಣಾಧಿಕಾರಿಗಳು ವಿಮಾನ ಯೋಜನೆಗಳನ್ನು ಕೈಯಾರೆ ನಿರ್ವಹಣೆ ಮಾಡುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಸ್ವಲ್ಪ ಸಮಸ್ಯೆ ಆಗುತ್ತಿದೆ. ತಾಂತ್ರಿಕ ತಂಡಗಳು ಈ ಸಮಸ್ಯೆಗೆ ಪರಿಹಾರ ಮಾಡುತ್ತಿದ್ದು, ಸಾಧ್ಯವಾದಷ್ಟು ಬೇಗ ಮತ್ತೆ ಇದು ಆರಂಭ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

