ಚೆನ್ನೈ: ತಮಿಳುನಾಡಿನ ಹೊಸೂರಿನಲ್ಲಿರುವ ‘ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್’ ಕಾರ್ಖಾನೆಯಲ್ಲಿ ಸೋಮವಾರ (ನಿನ್ನೆ) ಸಂಜೆ ಭಾರೀ ದುರಂತ ಸಂಭವಿಸಿದೆ. ದುರಂತದಲ್ಲಿ ಮೂವರು ಗುತ್ತಿಗೆ ಕಾರ್ಮಿಕರು ಮೃತಪಟ್ಟಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ವಿಷಾನಿಲ ಸೇವಿಸಿ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರನ್ನ ಹೊಸೂರಿನ ನಿವಾಸಿ ಕಾವೇರಿ (30), ಧರ್ಮಪುರಿ ಜಿಲ್ಲೆಯ ನಿವಾಸಿಗಳಾದ ಬಿ. ಅಕ್ಮಲ್ (28) ಮತ್ತು ಎಂ. ಸಾರಥಿ ಕುಮಾರ್ (28) ಎಂದು ಗುರುತಿಸಲಾಗಿದೆ.
ಆಪಲ್ ಐಫೋನ್ ಬಿಡಿಭಾಗಗಳನ್ನ ತಯಾರಿಸುವ ಈ ಕಾರ್ಖಾನೆಯಲ್ಲಿ, ತ್ಯಾಜ್ಯ ನೀರು ಸಂಗ್ರಹಣಾ ತೊಟ್ಟಿ (ನ್ಯಾನೋ ಫಿಲ್ಟರ್ ಟ್ಯಾಂಕ್) ಯನ್ನ ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಸಾವಪ್ಪಿದ್ದಾರೆ ಎಂದು ಹೇಳಲಾಗ್ತಿದೆ.
ತಮಿಳುನಾಡಿನ ಕೈಗಾರಿಕಾ ಸಚಿವೆ ವಿರುಧೈ ಮಗಲ್ ಕೀರ್ತನಾ ಅವರು, ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವು ಒದಗಿಸುವಂತೆ ಹಾಗೂ ಈ ವಿಷಯವನ್ನು ತುರ್ತಾಗಿ ನಿರ್ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಸಂಕೀರ್ಣದಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ತೊಟ್ಟಿಯಲ್ಲಿ ಸಂಗ್ರಹವಾಗಿದ್ದ ಕೆಸರು ಮತ್ತು ಮಣ್ಣನ್ನ ಸ್ವಚ್ಛಗೊಳಿಸಲು ಈ ಮೂವರು ಕಾರ್ಮಿಕರು ‘ಇಟಿಪಿ’ ಟ್ಯಾಂಕ್ನೊಳಗೆ ಇಳಿದಿದ್ದರು. ಸ್ವಚ್ಛಗೊಳಿಸುವ ವೇಳೆ ವಿಷಾನೀಲ ಹೊರಸೂಸಿದೆ. ಇದರಿಂದ ಆಮ್ಲಜನಕದ ಕೊರತೆಯಾಗಿ ಮೂವರು ಗುತ್ತಿಗೆ ಕಾರ್ಮಿಕರು ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಬಿದ್ದರು.
ತಕ್ಷಣವೇ ಅವರನ್ನ ಹೊಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದರು. ನಂತರ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೃಷ್ಣಗಿರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು.

