ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಕೆ.ಅಣ್ಣಾಮಲೈ, ತಮಿಳುನಾಡಿನ ಮತಪಟ್ಟಿಯಲ್ಲಿ ಅತ್ಯಧಿಕ ಸಂಖ್ಯೆಯ ನಕಲಿ ಮತದಾರರು ಸೇರ್ಪಡೆಯಾಗಿದ್ದು, ಅವರನ್ನೆಲ್ಲ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ 2.0 ಮೂಲಕ ತುರ್ತಾಗಿ ತೆಗೆದು ಹಾಕಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಶನಿವಾರ ತಿರುಚ್ಚಿ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳು ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಕುರಿತು ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ತಮಿಳುನಾಡಿನಲ್ಲಿ ನಡೆಸಲು ಉದ್ದೇಶಿಸಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಕುರಿತು ಪ್ರಸ್ತಾಪಿಸಿದ ಅಣ್ಣಾಮಲೈ, “ಬಿಹಾರದಲ್ಲಿ ಶೇ. 6.49ರಷ್ಟು ನಕಲಿ ಮತದಾರರನ್ನು ತೆಗೆದು ಹಾಕಲಾಗಿದೆ” ಎಂದು ಹೇಳಿದ್ದಾರೆ.
“ತಮಿಳುನಾಡಿನಲ್ಲಿ ಅತ್ಯಧಿಕ ಪ್ರಮಾಣದ ನಕಲಿ ಮತದಾರರಿದ್ದಾರೆ. ಡಿಎಂಕೆಯನ್ನು ಬೆಂಬಲಿಸುತ್ತಿರುವ ಕಂದಾಯಾಧಿಕಾರಿಗಳೇ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ವಿರೋಧಿಸುತ್ತಿರುವುದು. ಈ ಸಂಬಂಧ ಸರ್ವಪಕ್ಷಗಳ ಸಭೆಯನ್ನು ಆಯೋಜಿಸಲು ಡಿಎಂಕೆ ಸರಕಾರ ನಿರಾಕರಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

