ನವದೆಹಲಿ : ಕೇರಳದ ಬಿಜೆಪಿ ಸಂಸದ, ಮಲಯಾಳಂ ನಟನಾಗಿರುವ ಸುರೇಶ್ ಗೋಪಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲು ಬಯಸುತ್ತಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಕೇರಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲವು ತಂದುಕೊಟ್ಟ ಸುರೇಶ್ ಗೋಪಿ ಅವರು ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಇವರು ಸಚಿವ ಸ್ಥಾನವನ್ನು ತ್ಯಜಿಸಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ʻನಾನು ಮೋದಿ ಸರ್ಕಾರ ಸಚಿವ ಸಂಪುಟಕ್ಕೆ ರಾಜಿನಾಮೆ ನೀಡಲಿದ್ದೇನೆ ಎಂದು ಕೆಲವು ಮಾಧ್ಯಮಗಳು ತಪ್ಪು ಸುದ್ದಿಯನ್ನು ಹರಡುತ್ತಿವೆ. ಇದು ಊಹಾಪೋಹವಷ್ಟೆ, ಇದು ಸತ್ಯಕ್ಕೆ ದೂರವಾಗಿದೆ. ಮೋದಿ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡುವುದು ಮತ್ತು ಸಂಸತ್‌ನಲ್ಲಿ ಕೇರಳದ ಜನರನ್ನು ಪ್ರತಿನಿಧಿಸುವುದು ನನಗೆ ಹೆಮ್ಮೆಯ ವಿಷಯʼ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

