ನವದೆಹಲಿ: ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್ ನ ಮಾಲೀಕರು ತಮ್ಮ ಹೆಸರನ್ನು ಹೋಟೆಲ್ ಹೊರಗಡೆ ನಮೂದಿಸಬೇಕು ಎಂಬ ಉತ್ತರಪ್ರದೇಶ ಸರ್ಕಾರದ ವಿವಾದಿತ ಆದೇಶಕ್ಕೆ ಸುಪ್ರೀಂಕೋರ್ಟ್ ಸೋಮವಾರ (ಜುಲೈ 22) ತಡೆ ನೀಡಿದೆ.
ಕನ್ವರ್ ಯಾತ್ರೆಯ ಮಾರ್ಗದಲ್ಲಿ ಊಟೋಪಚಾರ ನೀಡುವ ಹೋಟೆಲ್ ಮಾಲೀಕರು ಹಾಗೂ ಉದ್ಯೋಗಿಗಳ ಗುರುತನ್ನು ಹೊರಗಡೆ ನಮೂದಿಸಬೇಕು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು.
ಈ ಆದೇಶಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಉತ್ತರಪ್ರದೇಶ ಸರ್ಕಾರದ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ದಾಖಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಜಸ್ಟೀಸ್ ಹೃಷಿಕೇಶ್ ರಾಯ್ ಮತ್ತು ಜಸ್ಟೀಸ್ ಎಸ್ ವಿಎನ್ ಭಟ್ಟಿ ಅವರು ಉತ್ತರಪ್ರದೇಶ, ಉತ್ತರಾಖಂಡ್ ಮತ್ತು ಮಧ್ಯಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜು.26ಕ್ಕೆ ಮುಂದೂಡಿದೆ.

