ಮುಂಬೈ: ಮೊನ್ನೆ ಬುಧವಾರ ರತನ್ ಟಾಟಾ ನಿಧನದ ಬಳಿಕ ಅವರ ಕುಟುಂಬದಿಂದ ಟಾಟಾ ಗ್ರೂಪ್​ಗೆ ಯಾರು ಮುಂದಿನ ನಾಯಕತ್ವ ವಹಿಸುತ್ತಾರೆ ಎಂಬ ಪ್ರಶ್ನೆ ಇದೆ. ಇದಕ್ಕೆ ಇಂದು ಉತ್ತರ ಸಿಗುವ ಸಾಧ್ಯತೆ ಇದೆ. ಬ್ಲೂಮ್​ಬರ್ಗ್ ವರದಿ ಪ್ರಕಾರ ಮುಂಬೈನಲ್ಲಿ ಟಾಟಾ ಟ್ರಸ್ಟ್​ಗಳು ಇಂದು ಸಭೆ ನಡೆಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಈ ವರದಿಯು ಮೂಲಗಳನ್ನು ಉಲ್ಲೇಖಿಸಿ ಹೇಳುತ್ತಿದೆ.

ರತನ್ ಟಾಟಾ ಅವರು ಮುಂದಿನ ವಾರಸುದಾರಿಕೆ ವಿಚಾರದ ಬಗ್ಗೆ ಯಾವುದಾದರೂ ಉಯಿಲು ಬರೆದಿದ್ದಾರಾ ಅಥವಾ ಯಾರೊಂದಿಗಾದರೂ ಚರ್ಚಿಸಿದ್ದಾರಾ ಎಂಬ ಮಾಹಿತಿ ಸದ್ಯಕ್ಕೆ ಗೊತ್ತಾಗಿಲ್ಲ. ಟಾಟಾ ಸನ್ಸ್​ಗೆ ಸದ್ಯಕ್ಕೆ ಛೇರ್ಮನ್ ಆಗಿರುವುದು ಎನ್ ಚಂದ್ರಶೇಖರನ್. ಇವರು ಟಾಟಾ ಕುಟುಂಬಕ್ಕೆ ಸೇರಿದವರಲ್ಲ. ಟಾಟಾ ಕುಟುಂಬದಲ್ಲಿ ಸದ್ಯಕ್ಕೆ ಉಳಿದಿರುವವರೆಂದರೆ ನೋಯಲ್ ಟಾಟಾ ಹಾಗೂ ಅವರ ಮೂವರು ಮಕ್ಕಳಾದ ಮಾಯಾ, ಲಿಯಾ ಮತ್ತು ನೆವಿಲ್ಲೆ ಟಾಟಾ ಅವರುಗಳು.

ನೋಯಲ್ ಟಾಟಾ ಅವರು ರತನ್ ಅವರ ತಂದೆಯ ಎರಡನೇ ಪತ್ನಿಯ ಮಗ. ರತನ್ ಟಾಟಾ ಅವಿವಾಹಿತರಾಗಿದ್ದರು. ಅವರ ಕಿರಿಯ ಸಹೋದರ ಬಿಸಿನೆಸ್​ನಿಂದ ದೂರ ಇದ್ದಾರೆ. ಹೀಗಾಗಿ, ನೋಯಲ್ ಟಾಟಾ ಕುಟುಂಬದಲ್ಲಿ ಒಬ್ಬರಿಗೆ ನಾಯಕತ್ವ ಸಿಗಬಹುದು. ಈ ಪೈಕಿ ಮಾಯಾ ಟಾಟಾ ಮತ್ತು ನೆವಿಲ್ಲೆ ಟಾಟಾ ಅವರ ಹೆಸರು ದಟ್ಟವಾಗಿ ಕೇಳಿಬರುತ್ತಿದೆ.