ಉತ್ತರ ಪ್ರದೇಶ: ಭಯೋತ್ಪಾದನಾ ನಿಗ್ರಹ ದಳ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಿದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಹುಸೇನ್ ಅಲಿಯಾಸ್ ಶಾಹಿದ್ ಎಂದು ಗುರುತಿಸಲಾಗಿದೆ.
ವ್ಯಾಸ್‌ನಗರ ಮತ್ತು ಕಾಶಿ ನಿಲ್ದಾಣ ವ್ಯಾಪ್ತಿಯಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟದಲ್ಲಿ ತೊಡಗಿರುವವರ ವಿರುದ್ಧ ಗುಪ್ತಚರ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವ ಮೂಲಕ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎಟಿಎಸ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಕೆಲ ದಿನಗಳ ಹಿಂದೆ ವಾರಣಾಸಿಯಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಘಟನೆಯ ಸಂಬಂಧ ಪವನ್ ಕುಮಾರ್ ಸಾಹ್ನಿ ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣೆಯ ಸಮಯದಲ್ಲಿ, ಹುಸೇನ್ ಅಲಿಯಾಸ್ ಶಾಹಿದ್ ಕೂಡ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದು ಸಾಹ್ನಿ ಹೇಳಿದ್ದ. ಅದರಂತೆಯೇ ಪವನ್ ಕುಮಾರ್ ಮಾಹಿತಿಯ ಮೇರೆಗೆ ಹುಸೇನ್ ಚಂದೌಲಿಯ ಮುಘಲ್ ಸರೈನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವುದನ್ನು ಎಟಿಎಸ್ ಪತ್ತೆ ಮಾಡಿದ್ದು, ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಇದೀಗ ಆರೋಪಿ ಹುಸೇನ್ ನನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಬಾಗಿಲು ಮತ್ತು ಕಿಟಕಿಗಳ ಬಳಿ ಕುಳಿತಿರುವ ಪ್ರಯಾಣಿಕರಿಂದ ಮೊಬೈಲ್ ಫೋನ್‌ಗಳನ್ನು ಕಸಿದುಕೊಳ್ಳಲು ರೈಲಿನ ಮೇಲೆ ಕಲ್ಲು ಎಸೆಯುವುದು, ರೈಲು ನಿಧಾನವಾಗುವಂತೆ ಮಾಡುವುದು ಅವರ ಮುಖ್ಯ ಉದ್ದೇಶವಾಗಿತ್ತು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಗಳನ್ನು ಚಂದೌಲಿಯ ವ್ಯಾಸನಗರದಲ್ಲಿರುವ ರೈಲ್ವೇ ಸಂರಕ್ಷಣಾ ಪಡೆಗೆ ಹಸ್ತಾಂತರಿಸಲಾಯಿತು. ಈ ಪ್ರಕರಣದಲ್ಲಿ ಆರ್‌ಪಿಎಫ್ ಹೆಚ್ಚುವರಿ ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

