ಲಡಾಖ್: ಲಡಾಖ್‌ನ ಲೇಹ್ ಜಿಲ್ಲೆಯಲ್ಲಿ ಬಸ್ಸೊಂದು ರಸ್ತೆಯಿಂದ ಸ್ಕಿಡ್ ಆಗಿ 200 ಅಡಿ ಆಳದ ಕಮರಿಗೆ ಬಿದ್ದ ಪರಿಣಾಮ 6 ಜನರು ಸಾವನ್ನಪ್ಪಿದ್ದಾರೆ ಮತ್ತು 22 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶಾಲೆಯೊಂದರ ಸಿಬ್ಬಂದಿಯನ್ನು ಮದುವೆ ಕಾರ್ಯಕ್ರಮಕ್ಕೆ ಕರೆದೊಯ್ಯುತ್ತಿದ್ದ ಬಸ್ ದುರ್ಬುಕ್ ಪ್ರದೇಶದಲ್ಲಿ ಕಮರಿಗೆ ಬಿದ್ದಿದೆ ಎಂದು ಲೇಹ್ ಡೆಪ್ಯುಟಿ ಕಮಿಷನರ್ ಸಂತೋಷ್ ಸುಖದೇವ್ ಖಚಿತ ಪಡಿಸಿದ್ದಾರೆ. ಗಾಯಗೊಂಡ 22 ಜನರನ್ನು ಲೇಹ್‌ನಲ್ಲಿರುವ ಎಸ್‌ಎನ್‌ಎಂ ಆಸ್ಪತ್ರೆ ಮತ್ತು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲು ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.