ನವದೆಹಲಿ: ಬರ್ತ್ ಡೇ ಪಾರ್ಟಿಯಲ್ಲಿ ಪಿಸ್ತೂಲ್ ತೋರಿಸಿ ಡ್ಯಾನ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ದೀಪಕ್ ಶರ್ಮಾರನ್ನು ಅಮಾನತುಗೊಳಿಸಲಾಗಿದೆ.
ದೆಹಲಿಯ ತಿಹಾರ್ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಆಗಿದ್ದ ದೀಪಕ್ ಶರ್ಮಾ ಅವರು ಬರ್ತ್ಡೇ ಪಾರ್ಟಿಯೊಂದರಲ್ಲಿ ಗನ್ ಹಿಡಿದುಕೊಂಡು ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಪಿಸ್ತೂಲ್ ಹಿಡಿದ ವೇಳೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ವಿರೋಧ ಕೇಳಿ ಬಂದ ಬೆನ್ನಲ್ಲೇ ದುರ್ವರ್ತನೆ ತೋರಿದ್ದಾರೆ ಎಂದು ಉನ್ನತ ಅಧಿಕಾರಿಗಳು ದೀಪಕ್ ಶರ್ಮಾರನ್ನ ಅಮಾನತುಗೊಳಿಸಿದ್ದಾರೆ. ಅಲ್ಲದೇ ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ. ಮತ್ತೊಂದೆಡೆ, ಪಿಸ್ತೂಲ್ ದೀಪಕ್ ಶರ್ಮಾ ಅವರದ್ದೇ ಅಥವಾ ಇಲ್ಲವೇ ಎಂದು ಪರಿಶೀಲಿಸಲಾಗುತ್ತಿದೆ. ಈ ಕುರಿತು ತಿಹಾರ್ ಜೈಲು ಅಧಿಕಾರಿಗಳಿಗೆ ದೆಹಲಿ ಪೊಲೀಸರು ಸಂಪರ್ಕಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪೂರ್ವ ದೆಹಲಿಯಲ್ಲಿ ರಾಜಕೀಯ ನಾಯಕರೊಬ್ಬರು ಆಯೋಜಿಸಿದ್ದ ಪಾರ್ಟಿಯಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅವರ ಖಲ್ ನಾಯಕ್ ಸಿನಿಮಾದ ನಾಯಕ್ ನಹಿ, ಖಲ್ನಾಯಕ್ ಹೂನ್ ಮೈನ್ ಸಾಂಗ್ಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಇವರ ಜೊತೆ ಇನ್ನಿಬ್ಬರು ಕೂಡ ಡ್ಯಾನ್ಸ್ ಮಾಡಿದ್ದಾರೆ.
ಆದರೆ ಈ ವೇಳೆ ದೀಪಕ್ ಶರ್ಮಾ ಅವರು ಒಬ್ಬ ಸರ್ಕಾರಿ ಅಧಿಕಾರಿಯಾಗಿ ಪಿಸ್ತೂಲ್ ತೋರಿಸಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆದ ಬೆನ್ನಲ್ಲೇ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

