ಗಾಂಧಿನಗರ: ಶಾಲೆಯ ಗೋಡೆ ಕುಸಿದು ಬಿದ್ದ ಪರಿಣಾಮ 5 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್​ನ ವಡೋದರದ ಶ್ರೀ ನಾರಾಯಣ ವಿದ್ಯಾಲಯದಲ್ಲಿ  ನಡೆದಿದೆ.

ಮಧ್ಯಾಹ್ನದ ವೇಳೆ ಎಲ್ಲಾ ಮಕ್ಕಳನ್ನು ಊಟಕ್ಕೆ ಬಿಡಲಾಗಿತ್ತು. ಈ ವೇಳೆ 7ನೇ ತರಗತಿ ಮಕ್ಕಳು ಮೊದಲನೇ ಮಹಡಿಯ ಕೊಠಡಿಯಲ್ಲಿ 12:30ರ ಸುಮಾರಿಗೆ ಕುಳಿತು ಊಟ ಮಾಡುತ್ತಿದ್ದರು. ಆಗ ಆಕಸ್ಮಿಕವಾಗಿ ಒಂದು ಬದಿಯ ಗೋಡೆ ಕುಸಿದು ಬಿದ್ದಿದೆ.

ಇದರಿಂದ ಕೊಠಡಿಯಲ್ಲಿದ್ದ ಸುಮಾರು ಮಕ್ಕಳ ಪೈಕಿ 5 ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳು ಆಗಿವೆ. ಮಕ್ಕಳ ಸೈಕಲ್​ ಮೇಲೆ ಗೋಡೆ ಬಿದ್ದಿದ್ದರಿಂದ 10 ರಿಂದ 12 ಸೈಕಲ್ ನಜ್ಜುಗುಜ್ಜಾಗಿವೆ ಎಂದು ಹೇಳಲಾಗುತ್ತಿದೆ.

ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.