ಕೋಲ್ಕತ್ತ: ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸಂಜಯ್‌ ರಾಯ್‌ ಎಂಬಾತನನ್ನು ಇಲ್ಲಿನ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

31 ವರ್ಷದ ವಿದ್ಯಾರ್ಥಿನಿಯ ಶವ ಇಲ್ಲಿನ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ಆಗಸ್ಟ್‌ 9ರಂದು ಪತ್ತೆಯಾಗಿತ್ತು. ವೈದ್ಯೆ ಮೇಲೆ ಅತ್ಯಾಚಾರ ನಡೆದಿರುವುದನ್ನು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ. ಕತ್ತು ಹಿಸುಕುವ ಮೂಲಕ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ದೇಹದ ಹೊರ ಭಾಗದಲ್ಲಿ 7, ಆಂತರಿಕವಾಗಿ 9 ಗಾಯದ ಗುರುತುಗಳು ಕಂಡು ಬಂದಿವೆ. ಕೆನ್ನೆ, ತುಟಿ, ಮೂಗು, ಕತ್ತು, ತೋಳು, ಕಾಲುಗಳಲ್ಲಿ ಗಾಯಗಳಿದ್ದರೆ, ಶ್ವಾಸಕೋಶದಲ್ಲಿ ರಕ್ತಸ್ರಾವವಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಷ್ಟ್ರದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.