ಪಾಟ್ನಾ: ಬಿಹಾರದಲ್ಲಿ ಭೀಕರ ರೈಲು ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಖದಿರಾಮ್ ಬೋಸ್ ಪುಸಾ ರೈಲ್ವೆ ನಿಲ್ದಾಣದ ಕೂಗಳತೆಯ ದೂರದಲ್ಲಿ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಅಪಘಾತಕ್ಕೆ ಕಾರಣವಾಗಿದೆ.
ಎಕ್ಸ್‌ಪ್ರೆಸ್ ರೈಲು ನಿಲ್ದಾಣಕ್ಕೆ ತಲುಪುವ ಮುನ್ನವೇ ಬೋಗಿಯಿಂದ ಪ್ರತ್ಯೇಕಗೊಂಡ ಇಂಜಿನ್ ಬೇರೆ ದಿಕ್ಕಿನತ್ತ ಸಾಗಿದೆ. ಹಳಿ ತಪ್ಪಿದ ಇಂಜಿನ್ ಬೋಗಿಗಳಿಗಿಂತ ಮುಂದೆ ಸಾಗಿದೆ. ಈ ಹಳಿ ತಪ್ಪಿದ ದುರಂತವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ನೋಡಿದವರು ಬೆಚ್ಚಿ ಬಿದ್ದಿದ್ದಾರೆ.
ಕ್ಷಣಕಾಲ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಹಾಗೂ ರೇಲ್ವೆ ಸಿಬ್ಬಂದಿಯ ಪ್ರಾಣ ಹೋಗಿ ಬಂದಂತಾಗಿದೆ. ಘಟನೆಗೆ ಪ್ರಮುಖ ಕಾರಣ ಮ್ಯಾಕಿನಿಕಲ್ ಫ್ಯೆಲ್ಯೂವರ್ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಬೋಗಿ ಹಾಗೂ ಇಂಜಿನ್ ಬೇರ್ಪಟ್ಟಿದ್ದಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ, ಈ ಬಗ್ಗೆ ಸಮಗ್ರ ತನಿಖೆಗೆ ಆದೇಶ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ, ಆದರೂ ತುರ್ತು ಪರಿಸ್ಥಿತಿ ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿದೆ.

