ಲಕ್ನೋ: ಸರ್ಕಾರಿ ಅಧಿಕಾರಿಗಳು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ವಿವರವನ್ನು ಮಾನವ ಸಂಪದಾ ಎನ್ನುವ ಸರ್ಕಾರಿ ಪೋರ್ಟಲ್​ನಲ್ಲಿ ಆಗಸ್ಟ್ 31 ರೊಳಗೆ ಘೋಷಣೆ ಮಾಡಿಲ್ಲ ಎಂದರೆ ಈ ತಿಂಗಳ ಸಂಬಳ ಕಳೆದುಕೊಳ್ಳುತ್ತಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಸರ್ಕಾರಿ ಅಧಿಕಾರಿಗಳು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳನ್ನು ಮಾನವ ಸಂಪದಾ ಸರ್ಕಾರಿ ಪೋರ್ಟಲ್​ನಲ್ಲಿ ಘೋಷಣೆ ಮಾಡುವಂತೆ ಈ ಮೊದಲು ಸಾಕಷ್ಟು ಬಾರಿ ತಿಳಿಸಲಾಗಿತ್ತು. ಈ ಬಗ್ಗೆ ಸಿಎಂ ಆದಿತ್ಯನಾಥ್​ ಸರ್ಕಾರ ಹಲವು ಬಾರಿ ಗಡುವುಗಳನ್ನು ನಿಗದಿಪಡಿಸಿತ್ತು. ಆದರೂ ಸರ್ಕಾರಿ ಅಧಿಕಾರಿಗಳು ಆ ಗಡುವು ಮೀರಿದರು ತಮ್ಮ ಆಸ್ತಿ ವಿವರ ಘೋಷಣೆ ​ ಮಾಡಿರಲಿಲ್ಲ.

ಹೀಗಾಗಿ ಈ ಸಲ ಖಡಕ್ ಆಗಿ ವಾರ್ನ್ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರ ಆಗಸ್ಟ್​ 31ರೊಳಗೆ ತಮ್ಮ ಆಸ್ತಿಯ ಮಾಹಿತಿ ಘೋಷಿಸಿಲ್ಲ ಅಂದ್ರೆ ಈ ತಿಂಗಳ ಸಂಬಳ ಕಡಿತ ಮಾಡಲಾಗುವುದು ಎಂದು ಆದೇಶ ಹೊರಡಿಸಿದೆ. ಕೇವಲ ಶೇಕಡಾ 26ರಷ್ಟು ಮಾತ್ರ ಸಿಬ್ಬಂದಿ ಆಸ್ತಿ ಬಗ್ಗೆ ತಿಳಿಸಿದ್ದಾರೆ. ಆದರೆ ಸುಮಾರು 13 ಲಕ್ಷದಷ್ಟು ಅಧಿಕಾರಿಗಳು ಆಸ್ತಿ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾರು ಆಸ್ತಿ ವಿವರ ಘೋಷಣೆ ಮಾಡಿಲ್ಲವೋ ಅವರ ಆಸ್ತಿ ಕಡಿತ ಮಾಡಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.