ಕೋಲ್ಕತ್ತಾ: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಜಾನುವಾರುಗಳ ಹತ್ಯೆಯನ್ನು ನಿಯಂತ್ರಿಸಲು ಪಶ್ಚಿಮ ಬಂಗಾಳ ಸರ್ಕಾರ ಜಾರಿಗೆ ತಂದಿದ್ದ ಕಠಿಣ ನಿಯಮಗಳಿಗೆ ಕೊಲ್ಕತ್ತಾ ಹೈಕೋರ್ಟ್ ಸಂಪೂರ್ಣ ಕಾನೂನು ಮಾನ್ಯತೆ ನೀಡಿದೆ. ಸರ್ಕಾರದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿರುವ ನ್ಯಾಯಾಲಯ, “ಬಕ್ರೀದ್ ಹಬ್ಬದಲ್ಲಿ ಗೋವುಗಳನ್ನು ಬಲಿ ನೀಡುವುದು ಇಸ್ಲಾಂ ಧರ್ಮದ ಕಡ್ಡಾಯ ಆಚರಣೆಯ ಭಾಗವಲ್ಲ” ಎಂದು ಸ್ಪಷ್ಟಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಹಾಗೂ ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದ್ದು, ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ನೂತನ ಆದೇಶದ ಪ್ರಕಾರ, ಪಶ್ಚಿಮ ಬಂಗಾಳ ಪ್ರಾಣಿ ಹತ್ಯೆ ನಿಯಂತ್ರಣ ಕಾಯ್ದೆ 1950ರ ಅನ್ವಯ ಹಬ್ಬದ ದಿನಗಳಲ್ಲೂ ಯಾವುದೇ ಹಸು ಅಥವಾ ಎಮ್ಮೆಯನ್ನು ಕಸಾಯಿ ಮಾಡಬೇಕಿದ್ದಲ್ಲಿ, ಆ ಪ್ರಾಣಿಯು ಹತ್ಯೆಗೆ ಯೋಗ್ಯವಾಗಿದೆ ಎಂಬ ವೈದ್ಯಕೀಯ ಪ್ರಮಾಣಪತ್ರ ಹೊಂದುವುದು ಕಡ್ಡಾಯವಾಗಿದೆ. ಈ ನಿಯಮ ಉಲ್ಲಂಘಿಸಿ ಕಾನೂನುಬಾಹಿರವಾಗಿ ಪ್ರಾಣಿ ಹತ್ಯೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಸಿದೆ.

ಮೇ 27 ಮತ್ತು 28 ರಂದು ಹಬ್ಬ ಇರುವುದರಿಂದ ಈ ಕಾಯ್ದೆಯಡಿ ಯಾವುದೇ ವಿನಾಯಿತಿ ನೀಡಲು ಸಾಧ್ಯವೇ ಎಂಬುದನ್ನು 24 ಗಂಟೆಯೊಳಗೆ ಪರಿಶೀಲಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ರಸ್ತೆಗಳು, ಮೈದಾನಗಳು ಅಥವಾ ತೆರೆದ ಜಾಗಗಳಲ್ಲಿ ಮುಕ್ತವಾಗಿ ಪ್ರಾಣಿಗಳನ್ನು ಬಲಿ ಕೊಡುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೇವಲ ಪರವಾನಗಿ ಪಡೆದ ಕಸಾಯಿಖಾನೆಗಳಲ್ಲಿ ಮಾತ್ರ ನಿಯಮಾನುಸಾರ ಹತ್ಯೆ ನಡೆಸಲು ಅವಕಾಶ ಇರಬೇಕು ಎಂದು ನ್ಯಾಯಾಲಯ ಹೇಳಿದೆ.

ಕೋಲ್ಕತ್ತಾ ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಪ್ರಮಾಣಪತ್ರ ನೀಡುವ ಅಧಿಕಾರಿಗಳನ್ನು ಸಜ್ಜುಗೊಳಿಸಿದೆ ಎಂದು ಕೋರ್ಟ್ಗೆ ತಿಳಿಸಿದೆ. ಇಡೀ ರಾಜ್ಯಾದ್ಯಂತ ಈ ಪ್ರಮಾಣಪತ್ರ ವಿತರಣಾ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಹೊಣೆಗಾರಿಕೆಯನ್ನು ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ವಹಿಸಿದೆ.