ನವದೆಹಲಿ : ಚೀನಾದತ್ತ ಮುಖ ಮಾಡಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಬೃಹತ್ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಇದ್ದಕ್ಕಿದ್ದಂತೆ ಯು ಟರ್ನ್ ಪಡೆದು ಈಗ ಭಾರತದತ್ತ ಧಾವಿಸುತ್ತಿವೆ.
ಇರಾನ್ನೊಂದಿಗೆ ಮಾತುಕತೆಗಳ ಬಳಿಕ ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿದ್ದ ಇಂಧನ ಟ್ಯಾಂಕರ್ಗಳು ಭಾರತದತ್ತ ಸಾಗಿದೆ. ಚೀನಾಗೆ ಹೋಗುತ್ತಿದ್ದ ರಷ್ಯಾದ ತೈಲ ತುಂಬಿದ ಟ್ಯಾಂಕರ್ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಮಾರ್ಗವನ್ನು ಬದಲಾಯಿಸಿಕೊಂಡು ಈಗ ಭಾರತದತ್ತ ಸಾಗುತ್ತಿದೆ.
ಶಿಪ್-ಟ್ರ್ಯಾಕಿಂಗ್ ಡೇಟಾ ಪ್ರಕಾರ, ‘ಆಕ್ವಾ ಟೈಟನ್’ ಎಂಬ ನೌಕೆಯು ಮಾರ್ಚ್ 21 ರಂದು ಮಂಗಳೂರಿನ ನವಮಂಗಳೂರು ಬಂದರನ್ನು ತಲುಪುವ ನಿರೀಕ್ಷೆಯಿದೆ. ಜನವರಿ ಕೊನೆಯಲ್ಲಿ ರಷ್ಯಾದ ಬಾಲ್ಟಿಕ್ ಸಮುದ್ರದ ಬಂದರಿನಿಂದ ಯುರಲ್ಸ್ ತೈಲವನ್ನು ಲೋಡ್ ಮಾಡಿಕೊಂಡಿದ್ದ ಈ ಹಡಗು, ಆರಂಭದಲ್ಲಿ ಚೀನಾದ ರಿಝಾವೊ ಬಂದರಿನತ್ತ ಸಾಗುತ್ತಿತ್ತು. ಆದರೆ, ಆಗ್ನೇಯ ಏಷ್ಯಾದ ಜಲಪ್ರದೇಶಕ್ಕೆ ಬರುತ್ತಿದ್ದಂತೆ ದಿಕ್ಕು ಬದಲಿಸಿ ಭಾರತದತ್ತ ಮುಖ ಮಾಡಿದೆ.
ಅಚ್ಚರಿಯೆಂದರೆ, ರಷ್ಯಾದಿಂದ ತೈಲ ಖರೀದಿಯನ್ನು ತಾತ್ಕಾಲಿಕವಾಗಿ ಹೆಚ್ಚಿಸಲು ಅಮೆರಿಕವು ಭಾರತಕ್ಕೆ ಹಸಿರು ನಿಶಾನೆ ತೋರಿಸಿದ ಕೆಲವೇ ದಿನಗಳಲ್ಲಿ ಬದಲಾವಣೆ ನಡೆದಿದೆ. ಈಗಾಗಲೇ ರಷ್ಯಾದ ಹಾಗೂ ಭಾರತದ ಇಂಧನ ವಲಯದ ಸಂಬಂಧ ಸಾಕಷ್ಟು ದೃಢವಾಗಿದ್ದು, ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಚೀನಾಗೆ ತೆರಳಬೇಕಿದ್ದ ಯುರಲ್ಸ್ ಕಚ್ಚಾ ತೈಲದ ಸರಕುಗಳನ್ನು ಹೊತ್ತ ಅಫ್ರಾಮ್ಯಾಕ್ಸ್ ನ ಅಕ್ವಾ ಟೈಟಾನ್ ಟ್ಯಾಂಕರ್ ಭಾರತದ ನವಮಂಗಳೂರು ಬಂದರಿನತ್ತ ಸಾಗಿದೆ ಎಂದು ಹಡಗು-ಟ್ರ್ಯಾಕಿಂಗ್ ದತ್ತಾಂಶವನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಸ್ಥಗಿತಗೊಂಡಿರುವ ತೈಲ ಪೂರೈಕೆಯ ಕೊರತೆಯನ್ನು ನೀಗಿಸಲು ಭಾರತವು ರಷ್ಯಾದತ್ತ ಮೊರೆ ಹೋಗಿದೆ. ಕಳೆದ ಒಂದೇ ವಾರದಲ್ಲಿ ಭಾರತೀಯ ತೈಲ ಕಂಪನಿಗಳು ಬರೋಬ್ಬರಿ 30 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲವನ್ನು ಖರೀದಿಸಿವೆ.
ಹಡಗು-ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರ ಬಂದರಿನಿಂದ ಆರಂಭವಾದ ಯುರಲ್ಸ್ ಕಚ್ಚಾ ತೈಲವನ್ನು ಹೊತ್ತ ಅಫ್ರಾಮ್ಯಾಕ್ಸ್ ಟ್ಯಾಂಕರ್ ಅಕ್ವಾ ಟೈಟಾನ್ ಹಡಗು ಆರಂಭದಲ್ಲಿ ಚೀನಾದ ರಿಝಾವೊವನ್ನು ತನ್ನ ಗಮ್ಯಸ್ಥಾನವೆಂದು ಪಟ್ಟಿ ಮಾಡಿತ್ತು.
ಫೆಬ್ರವರಿ 28ರಂದು ಶುರುವಾದ ಉದ್ವಿಗ್ನತೆ ನಡುವೆ ಏಷ್ಯಾದಾದ್ಯಂತ ಇಂಧನ ಅನಿಶ್ಚಿತತೆ ಎದುರಾದ ಬೆನ್ನಲ್ಲೇ, ಇತ್ತೀಚೆಗೆ ರಷ್ಯಾದ ಹಡಗು ತನ್ನ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಪಥವನ್ನು ಬದಲಾಯಿಸಿದ್ದು ಭಾರತದ ಸಮುದ್ರ ಮಾರ್ಗದತ್ತ ತೆರಳಿರುವುದಾಗಿ ಟ್ರ್ಯಾಕ್ ಆಗಿದೆ. ಇನ್ನು, ಈ ಹಡಗು ಮಾರ್ಚ್ 21ರಂದು ನವಮಂಗಳೂರು ಬಂದರನ್ನು ತಲುಪುವ ನಿರೀಕ್ಷೆಯಿದೆ.

