ತಿರುವನಂತಪುರಂ: ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್ಮಾಲ ಹಾಗೂ ಪುಂಜಿರಿಮಟ್ಟಂನಲ್ಲಿ ನಡೆದಿದ್ದ ಭಾರೀ ಭೂಕುಸಿತದಿಂದಾಗಿ ಸಂತ್ರಸ್ತರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಇದೀಗ ಅವರನ್ನು ಸ್ಥಳಾಂತರಿಸಲಾಗಿದೆ.
ಕಾಳಜಿ ಕೇಂದ್ರಗಳನ್ನಾಗಿ ಮಾಡಿದ್ದ ಶಾಲೆಗಳಲ್ಲಿ ಮಂಗಳವಾರದಿಂದ ತರಗತಿಗಳು ಅರಂಭವಾಗಲಿದೆ. ಈ ಹಿನ್ನೆಲೆಯಲ್ಲಿ 2 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಕೆಲವರು ಸಂಬಂಧಿಕರ ಮನೆಗೆ ತೆರಳಿದರೆ, ಇನ್ನೂ ಕೆಲವರು ಸರ್ಕಾರ ವ್ಯವಸ್ಥೆ ಮಾಡಿರುವ ಬಾಡಿಗೆ ಮನೆಗೆ ತೆರಳಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಭೂಕುಸಿತ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಶನಿವಾರ ಪೂರ್ಣಗೊಂಡಿದೆ ಎಂದು ಸರ್ಕಾರ ಹೇಳಿದೆ. ಕಾಳಜಿ ಕೇಂದ್ರದಲ್ಲಿದ್ದ 728 ಕುಟುಂಬಗಳನ್ನು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಲಾಗಿದೆ. 2,569 ಮಂದಿ ಸರ್ಕಾರದ ವಿವಿಧ ವಸತಿ ಸಮುಚ್ಛಯ ಹಾಗೂ ಇತರೆ ಬಾಡಿಗೆ ಮನೆಗಳಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಚರ್ಚೆ ಮಾಡಲು ಆಗಸ್ಟ್ 29ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ವಪಕ್ಷ ಸಭೆ ಕರೆದಿದ್ದಾರೆ.

