ಲಹಾಬಾದ್: ಧಾರ್ಮಿಕ ಸಭೆಗಳಲ್ಲಿ ಮತಾಂತರಕ್ಕೆ ತಡೆ ಒಡ್ಡದಿದ್ದರೆ ಮುಂದೊಂದು ದಿನ ದೇಶದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.

ಅರ್ಜಿದಾರ ಕೈಲಾಶ್‌ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆ ಕಾಯಿದೆ, 2021ರ ಅಡಿಯಲ್ಲಿ ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸುವ ವೇಳೆ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್‌ ಈ ವಿಚಾರ ತಿಳಿಸಿದರು.

ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದ್ದ “ಕ್ಷೇಮ” ಕೂಟಕ್ಕೆ ಮಾಹಿತಿದಾರನ ಸಹೋದರನನ್ನು ಆತನ ಗ್ರಾಮದಿಂದ ಕರೆದೊಯ್ಯಲಾಗಿತ್ತು. ಅವನೊಂದಿಗೆ, ಹಳ್ಳಿಯ ಅನೇಕ ವ್ಯಕ್ತಿಗಳನ್ನು ಕ್ರೈಸ್ತ ಧರ್ಮಕ್ಕೆ ಪರಿವರ್ತಿಸಲು ಕರೆದೊಯ್ಯಲಾಗಿತ್ತು.

ಈ ಹಿನ್ನೆಲೆಯಲ್ಲಿ ಇಂತಹ ಆಚರಣೆ ಮುಂದುವರೆಸಲು ಅವಕಾಶ ನೀಡಿದರೆ ಮುಂದೊಂದು ದಿನ ಬಹುಸಂಖ್ಯಾತರೆಲ್ಲಾ ಅಲ್ಪಸಂಖ್ಯಾತರಾಗುತ್ತಾರೆ. ಧರ್ಮ ಬದಲಾಯಿಸುವ ಇಂತಹ ಧಾರ್ಮಿಕ ಸಭೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಪ್ರಕರಣದ ಆರೋಪಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ.