ಶ್ರೀನಗರ: ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಗೆ ಇಡೀ ದೇಶವೇ ಬೆಚ್ಚಿ ಬಿದ್ದಿದ್ದು, ಈ ಗುಂಡಿನ ದಾಳಿಯಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದರು. ಶಿವ ಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಇದೀಗ ಜಮ್ಮು ಕಾಶ್ಮೀರ ಪೊಲೀಸರು ಶಂಕಿತ ಉಗ್ರನ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದು, ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.
ಭಯೋತ್ಪಾದಕನ ಬಗ್ಗೆ ಸುಳಿವು ಸಿಕ್ಕವರು ರಿಯಾಸಿ ಎಸ್ಎಸ್‌ಪಿ – 9205571332, ರಿಯಾಸಿ ಎಎಸ್‌ಪಿ- 9419113159, ರಿಯಾಸಿ ಡಿವೈಎಸ್‌ಪಿ ಪ್ರಧಾನ ಕಚೇರಿ – 9419133499, ಪೂನಿ ಎಸ್ಎಚ್ಒ- 7051003214, ರಾನ್ಸೂ ಎಸ್ಎಚ್ಒ – 7051003213, ರಿಯಾಸಿ ಪಿಸಿಆರ್ – 9622856295 ನಂಬರ್‌ಗೆ ಮಾಹಿತಿ ನೀಡಬೇಕೆಂದು ಪ್ರಕಟಣೆ ತಿಳಿಸಿದೆ.
ಈ ದಾಳಿಯಲ್ಲಿ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಕೂವಾಡ ಇದೆ ಎಂದು ಶಂಕಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ತಂಡವು ಸೋಮವಾರ ರಿಯಾಸಿಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದೆ ಮತ್ತು ಎನ್ಐಎಯ ವಿಧಿವಿಜ್ಞಾನ ತಂಡವು ಪುರಾವೆಗಳನ್ನು ಸಂಗ್ರಹಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ರಿಯಾಸಿಯಲ್ಲಿ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಯ ಘಟನೆಯಿಂದ ಆಳವಾದ ನೋವಾಗಿದೆ. ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮತ್ತು ಡಿಜಿಪಿ ಜತೆ ಘಟನೆಯ ಬಗ್ಗೆ ವಿಚಾರಿಸಿದ್ದೇನೆ. ಈ ಭೀಕರ ದಾಳಿಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ದಾಳಿಕೋರರು ಕಾನೂನಿನ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಹೇಳಿದ್ದಾರೆ.

