ನವದೆಹಲಿ: ಬಿಜೆಪಿ ನೂತನ ಸಂಸದೆ ನಟಿ ಕಂಗನಾ ರಣಾವತ್ ಗೆ ಇತ್ತೀಚಗೆ ಏರಪೋರ್ಟ್‌ನಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಕಪಾಳ ಮೋಕ್ಷ ಮಾಡಿದ ಘಟನೆ ಇನ್ನೂ ತಣ್ಣಗಾಗಿಲ್ಲ. ಈ ಸಂಬಂಧ ಸಿಬ್ಬಂದಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಈ ಘಟನೆ ಬಗ್ಗೆ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರು ತಾನು ಮಾಡಿದ ಕೃತ್ಯದ ಬಗ್ಗೆ ಸಮರ್ಥನೆ ನೀಡಿದ್ದು, ‘ರೈತ ಚಳವಳಿಯಲ್ಲಿ ತೊಡಗಿರುವ ಮಹಿಳೆಯರ ಬಗ್ಗೆ ಕಂಗನಾ ರನೌತ್ ಅವಹೇಳನಕಾರಿಯಾಗಿ ಮಾತನಾಡಿದ್ದರು.
ಕೇಂದ್ರ ಸರ್ಕಾರ ಜಾರಿ ತರಲು ಹೊರಟಿದ್ದ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ಮಹಿಳೆಯರನ್ನು ಅವರು 100 ರೂಪಾಯಿಗೆ ಇಂತಹ ಚಳವಳಿಗಳಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಹೇಳಿದ್ದರು. ಅದರಲ್ಲಿ ನನ್ನ ತಾಯಿಯು ಕೂಡ ಇದ್ದರು. ಹಾಗಾಗಿ ನನ್ನೊಳಗೆ ಆಕ್ರೋಶ ಇತ್ತು’ ಎಂದು ತಾನು ಕಪಾಳಮೋಕ್ಷ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕುಲ್ವಿಂದರ್ ಕೌರ್, ‘ನನ್ನ ತಾಯಿಯ ಗೌರವಕ್ಕಾಗಿ ಅಂತಹ ಸಾವಿರಾರು ಉದ್ಯೋಗಗಳನ್ನು ಕಳೆದುಕೊಳ್ಳಲು ನಾನು ಸಿದ್ಧಳಿದ್ದೇನೆ’ ಎಂದು ಹೇಳಿದ್ದಾರೆ.

