ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟಕ್ಕೆ ತೆಲುಗು ದೇಶಂ ಪಕ್ಷದ ಸಂಸದ ರಾಮಮೋಹನ್ ನಾಯ್ಡು ಕಿಂಜರಾಪು (36) ಸೇರ್ಪಡೆಯಾಗಿದ್ದಾರೆ. ಇಂದು ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಮಾಜಿ ಕೇಂದ್ರ ಸಚಿವ ಯರ್ರಾನ್ ನಾಯ್ಡು ಅವರ ಪುತ್ರರಾಗಿರುವ ರಾಮಮೋಹನ್ ನಾಯ್ಡು ಮೋದಿ ಸಂಪುಟದ ಕಿರಿಯ ಸಚಿವರಾಗಲಿದ್ದಾರೆ.

36 ವರ್ಷದ ರಾಮಮೋಹನ್ ನಾಯ್ಡು ಸತತವಾಗಿ ಮೂರನೇ ಬಾರಿ ಅಂಧ್ರಪ್ರದೇಶದ ಶ್ರೀಕಾಕುಳಂ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಶ್ರೀಕಾಕುಳಂ ಲೋಕಸಭಾ ಕ್ಷೇತ್ರಕ್ಕೆ ಮೇ 13ರಂದು ಮತದಾನ ನಡೆದಿತ್ತು. ತಮ್ಮ ವಿರುದ್ಧ ಸ್ಪರ್ಧಿಸಿದ್ದ ವೈಎಸ್‌ಆರ್‌ಸಿಪಿ ಅಭ್ಯರ್ಥಿ ತಿಲಕ್ ಪೆರಡಾ ಅವರನ್ನು 3.2 ಲಕ್ಷ ಮತಗಳ ಅಂತರದಿಂದ ಸೋಲಿಸಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ದಾಖಲೆ ಬರೆದಿದ್ದಾರೆ. ಇದೀಗ ಪ್ರಧಾನಿ ಮೋದಿಯವರ ಹ್ಯಾಟ್ರಿಕ್ ಸಂಪುಟದ ಭಾಗವಾಗಿದ್ದಾರೆ.