ನವದೆಹಲಿ: ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಹತ್ಯೆ, ಅತ್ಯಾಚಾರ ಪ್ರಕರಣ ಸಂಬಂಧ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ದೂರಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ವ್ಯವಸ್ಥೆಯ ವೈಫಲ್ಯ ದೇಶದಾದ್ಯಂತ ವೈದ್ಯರ ಸುರಕ್ಷತೆಗೆ ಸವಾಲಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

‘ಮಹಿಳೆಯರು ಕೆಲಸಕ್ಕೆ ತೆರಳಲು ಸಾಧ್ಯವಾಗದಿದ್ದರೆ ಅಥವಾ ಕೆಲಸದ ಸ್ಥಳದಲ್ಲಿ ಸುರಕ್ಷತೆ ಇಲ್ಲದಿದ್ದರೆ, ನಾವು ಅವರನ್ನು ಸಮಾನವಾಗಿ ಕಾಣುತ್ತಿಲ್ಲ ಎನ್ನುವ ಅರ್ಥ ಮೂಡುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ನೇತೃತ್ವದ, ಜೆ.ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಹೇಳಿದೆ.

‘ಪಶ್ಚಿಮ ಬಂಗಾಳ ಸರ್ಕಾರ ತನ್ನ ಅಧಿಕಾರವನ್ನು ಪ್ರತಿಭಟನಕಾರರ ಮೇಲೆ ತೋರಿಸುವುದು ತರವಲ್ಲ, ದೇಶದಲ್ಲಿ ಭಯ, ಆತಂಕವನ್ನು ತೊಡೆದು ಹಾಕುವ ಸಮಯ ಇದಾಗಿದೆ. ದೇಶವು ಇನ್ನೊಂದು ಅತ್ಯಾಚಾರವನ್ನು ಬಯಸುವುದಿಲ್ಲ’ ಎಂದ ಕೋರ್ಟ್‌, ವಿದ್ಯಾರ್ಥಿನಿಯ ಹತ್ಯೆ, ಅತ್ಯಾಚಾರ ಮತ್ತು ಆರ್‌. ಜಿ ಕರ್ ಆಸ್ಪತ್ರೆ ಮೇಲಿನ ಗುಂಪು ದಾಳಿ ತನಿಖೆಯ ಪ್ರಗತಿಯ ಕುರಿತು ಆ.22 ರೊಳಗೆ ತನಿಖೆಯ ಸ್ಥಿತಿಗತಿಯ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳಕ್ಕೆ ನಿರ್ದೇಶನ ನೀಡಿದೆ.