ಉತ್ತರಪ್ರದೇಶ: ಲೋಕಸಭಾ ಚುನಾವಣೆಯ ಪ್ರಚಾರ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಜೂನ್‌ 1ರಂದು 7ನೇ ಹಂತದ ಮತದಾನ ನಡೆಯುತ್ತಿದೆ. ಜೂನ್‌ 4ರಂದು ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದೆ. ಅಂತಿಮ ಹಂತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಉತ್ತರ ಪ್ರದೇಶದ ದಿಯೋರಿಯೋದಲ್ಲಿ ರಾಹುಲ್ ಗಾಂಧಿ ಅವರು ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಿದರು. ಬಿಸಿಲು ಜಾಸ್ತಿ ಇದೆ ಅಲ್ಲವೇ ಎಂದ ರಾಹುಲ್ ಗಾಂಧಿ ಅವರು ಭಾಷಣದ ವೇಳೆ ತಲೆ ಮೇಲೆ ನೀರು ಸುರಿದುಕೊಂಡಿದ್ದಾರೆ.

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಎಲ್ಲರೂ ಜೈವಿಕವಾಗಿ ಹುಟ್ಟಿರುವವರು. ಆದರೆ ನರೇಂದ್ರ ಮೋದಿ ಅವರು ಮಾತ್ರ ಜೈವಿಕವಾಗಿ ಹುಟ್ಟಿಲ್ಲ. ಪರಮಾತ್ಮ, ಮೋದಿಯನ್ನು ರೈತರು, ಕಾರ್ಮಿಕರಿಗೆ ಸಹಾಯ ಮಾಡಲು ಕಳಿಸಿಲ್ಲ.

ನರೇಂದ್ರ ಮೋದಿಯವರನ್ನು ಅವರ ಪರಮಾತ್ಮ ಅಂಬಾನಿ, ಅದಾನಿಗೆ ಸಹಾಯ ಮಾಡಲು ಕಳಿಸಿದ್ದಾರೆ. ಒಂದು ವೇಳೆ ಪರಮಾತ್ಮ ಕಳಿಸಿದ್ದರೆ ಮೋದಿ ಬಡವರು, ರೈತರು, ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದರು. ಇವರೆಂಥಾ ಪರಮಾತ್ಮ? ಇದು ನರೇಂದ್ರ ಮೋದಿ ಅವರ ಪರಮಾತ್ಮ ಎಂದರು.