ನವದೆಹಲಿ: ವಯನಾಡಿನಲ್ಲಿ ತೀವ್ರ ಭೂಕುಸಿತದ ಸಮಸ್ಯೆ ಎದುರಿಸುತ್ತಿದ್ದರೂ ಅಲ್ಲಿನ ಸಂಸದರಾಗಿದ್ದ ರಾಹುಲ್‌ ಗಾಂಧಿ ಒಮ್ಮೆಯೂ ಅದರ ಬಗ್ಗೆ ಮಾತೇ ಆಡಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.

ದೇಶದ ವಿವಿಧೆಡೆಗಳಲ್ಲಿ ಪ್ರವಾಹ ಹಾಗೂ ಭೂಕುಸಿತದಿಂದ ಉಂಟಾದ ಹಾನಿಯ ಬಗ್ಗೆ ಬುಧವಾರ ಗಮನ ಸೆಳೆಯುವ ಸೂಚನೆಯ ಮೇಲೆ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ‘ವಯನಾಡ್‌ ಸಂಸದರಾಗಿದ್ದಾಗ ರಾಹುಲ್‌ ಗಾಂಧಿ ಒಮ್ಮೆಯೂ ಸಂಸತ್ತಿನಲ್ಲಿ ಭೂಕುಸಿತದ ಬಗ್ಗೆ ಮಾತನಾಡಲಿಲ್ಲ.

ಕೇರಳದ ವಿಪತ್ತು ಪರಿಹಾರ ಏಜೆನ್ಸಿಗಳು ವಯನಾಡಿನಲ್ಲಿ ಅಕ್ರಮ ಅರಣ್ಯ ಒತ್ತುವರಿಗಳನ್ನು ಧಾರ್ಮಿಕ ಸಂಸ್ಥೆಗಳ ಒತ್ತಡದಿಂದಾಗಿ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದವು. ಇದನ್ನೇ ಅಲ್ಲಿನ ಅರಣ್ಯ ಸಚಿವರೂ ಸದನಕ್ಕೆ ತಿಳಿಸಿದ್ದರು’ ಎಂದು ಆಕ್ಷೇಪಿಸಿದರು. ಅವರ ಮಾತಿಗೆ ಕಾಂಗ್ರೆಸ್‌ ಸಂಸದರು ಪ್ರತಿಭಟನೆ ಆರಂಭಿಸಿದರು. ಹೀಗಾಗಿ ಲೋಕಸಭೆಯ ಕಲಾಪವನ್ನು ಸಂಜೆ 4 ಗಂಟೆಯವರೆಗೆ ಕೆಲ ಕಾಲ ಮುಂದೂಡಲಾಗಿತ್ತು

ದೇಶದ ವಿವಿಧ ಭಾಗಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಜೀವ ಮತ್ತು ಆಸ್ತಿ ನಷ್ಟದ ಕುರಿತು ಲೋಕಸಭೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದ ಜನರಿಗೆ ಎಲ್ಲಾ ರೀತಿಯಲ್ಲೂ ಕೇಂದ್ರ ಸರ್ಕಾರ ಸಹಾಯ ಮಾಡಬೇಕು. ಅಲ್ಲಿನ ಪರಿಸರ ಸಮಸ್ಯೆಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದರು.