ಹೊಸದಿಲ್ಲಿ: ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತ್ವರಿತ ತೀರ್ಪುಗಳು ದೇಶಕ್ಕೆ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಆ.31) ಹೇಳಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಮಕ್ಕಳ ಸುರಕ್ಷತೆಯು ಸಮಾಜಕ್ಕೆ ಗಂಭೀರ ಕಾಳಜಿಯ ವಿಷಯವಾಗಿದೆ ಎಂದು ಅವರು ಹೇಳಿದರು. ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ಆಕ್ರೋಶದ ನಡುವೆಯೇ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.
ಸುಪ್ರೀಂಕೋರ್ಟ್‌ಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಮಹಿಳೆಯರ ಸುರಕ್ಷತೆಗಾಗಿ ದೇಶದಲ್ಲಿ ಅನೇಕ ಕಠಿಣ ಕಾನೂನುಗಳನ್ನು ಮಾಡಲಾಗಿದೆ, ಆದರೆ ನಾವು ಅದನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಬೇಕಾಗಿದೆ ಎಂದು ಹೇಳಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಎಷ್ಟು ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆಯೋ, ಅರ್ಧದಷ್ಟು ಜನಸಂಖ್ಯೆಯ ಸುರಕ್ಷತೆಯ ಹೆಚ್ಚಿನ ಭರವಸೆ ಸಿಗುತ್ತದೆ ಎಂದಿದ್ದಾರೆ ಪ್ರಧಾನಿ.

