ನವದೆಹಲಿ: ಹಾವೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ.
ಈ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬಳಿಯ ಎಮ್ಮೆಹಟ್ಟಿ ಗ್ರಾಮದ 13 ಮಂದಿ ಮೃತಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 13 ಜನರು ಮೃತಪಟ್ಟಿರುವ ಸುದ್ದಿ ತಿಳಿದು ದುಃಖವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಮುರ್ಮು ಹೇಳಿದ್ದಾರೆ.
ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ವಾಹನದಲ್ಲಿದ್ದ ಚಾಲಕ ಸೇರಿ ನಾಲ್ವರು ಪುರುಷರು, ಏಳು ಜನ ಮಹಿಳೆಯರು, ಅಜ್ಜಿ, ಮಗು ಮೃತಪಟ್ಟಿದ್ದಾರೆ.
ಮೃತರೆಲ್ಲರೂ ಬೆಳಗಾವಿ ಜಿಲ್ಲೆಯ ಚಿಂಚಲಿ ಮಾಯಮ್ಮ ದೇವಿ ದರ್ಶನ ಮುಗಿಸಿಕೊಂಡ ನಂತರ ಎಲ್ಲಮ್ಮನಗುಡ್ಡಕ್ಕೆ ತೆರಳಿ ದೇವರ ದರ್ಶನ ಮುಗಿಸಿಕೊಂಡು ಊರಿಗೆ ವಾಪಸ್ ಆಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

