ಕಾಸರಗೋಡು: ʼಆಪರೇಷನ್ ತೂಫಾನ್’ ಅಂಗವಾಗಿ ಪೊಲೀಸರು ದಾಳಿ ನಡೆಸಿ ಕಾರಿನಲ್ಲಿ ಸಾಗಿಸುತ್ತಿದ್ದ 21,873 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ಸಹಿತ ಓರ್ವನನ್ನು ಬಂಧಿಸಲಾದ ಘಟನೆ ಮಧೂರು ಪಟ್ಲದಲ್ಲಿ ನಡೆದಿದೆ.

ಮಧೂರು ಪಟ್ಲದ ಕೆ. ಇಬ್ರಾಹಿಂ ಬಾತಿಷಾ (36) ಬಂಧಿತ ಆರೋಪಿ. ನಿಷೇಧಿತ ಪಾನ್ ಮಸಾಲ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರು ಮತ್ತು ಮಾರಾಟದಿಂದ ಬಂದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

‘ಆಪರೇಷನ್ ತೂಫಾನ್’ ವಿಶೇಷ ಕಾರ್ಯಾಚರಣೆಯ ಅಂಗವಾಗಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಪಟ್ಲ ಶಾಲೆಯ ಸಮೀಪ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಲಾಗಿದ್ದ ಕಾರು ಪೊಲೀಸರ ಗಮನಕ್ಕೆ ಬಂದಿದೆ. ಕಾರಿನ ಗ್ಲಾಸ್ ಗಮನಿಸಿದಾಗ ಪ್ಲಾಸ್ಟಿಕ್ ಚೀಲಗಳು ಇರುವುದು ಕಂಡುಬಂದಿದ್ದು, ಸಂಶಯ ಗೊಂಡ ಪೊಲೀಸರು ಪರಿಶೀಲನೆ ನಡೆಸಿದಾಗ ನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ.