ಜಮ್‌ಶೆಡ್‌ಪುರ: ಕಾಡು ಪ್ರಾಣಿಗಳ ಕಳ್ಳ ಬೇಟೆ ಆರೋಪಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ವಿವಿಧ ಭಾಗಗಳಿಂದ ಸೇನಾ ಸಿಬ್ಬಂದಿ ಸೇರಿದಂತೆ ಎಂಟು ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳಿಂದ ಪ್ರಾಣಿಗಳ ದೇಹದ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೂರ್ವ ಸಿಂಗ್‌ಭೂಮ್, ಪಶ್ಚಿಮ ಸಿಂಗ್‌ಭೂಮ್ ಮತ್ತು ಪಲಮು ಜಿಲ್ಲೆಗಳಲ್ಲಿ ಕಳೆದ 15 ದಿನಗಳಲ್ಲಿ ನಡೆಸಿದ ದಾಳಿಯಲ್ಲಿ ಕಳ್ಳ ಬೇಟೆಗಾರರನ್ನು ಬಂಧಿಸಲಾಗಿದೆ ಎಂದು ಜಮ್‌ಶೆಡ್‌ಪುರ ವಿಭಾಗೀಯ ಅರಣ್ಯಾಧಿಕಾರಿ ಸಬಾ ಆಲಂ ಅನ್ಸಾರಿ ತಿಳಿಸಿದ್ದಾರೆ.

ವಶಕ್ಕೆ ಪಡೆದ ಪ್ರಾಣಿಗಳ ದೇಹದ ಭಾಗಗಳ ಪೈಕಿ ಚಿರತೆಯ ಚರ್ಮ ಮತ್ತು ಎರಡು ಜಿಂಕೆ ಕೊಂಬುಗಳು ಸೇರಿವೆ ಎಂದು ಡಿಎಫ್‌ಒ ತಿಳಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದೂ ಡಿಎಫ್‌ಒ ತಿಳಿಸಿದ್ದಾರೆ.