ಅಹಮದಾಬಾದ್ : ಏರ್ ಇಂಡಿಯಾ ವಿಮಾನ ದುರಂತದಲ್ಲಿ 241 ಮಂದಿ ಸಾವನ್ನಪ್ಪಿದ್ದು, ಇದೀಗ ಪ್ರಧಾನಿ ಮೋದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಜೂನ್ 12ರಂದು ಅಹಮಾದಾಬಾದ್‌ನ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ AI171 ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಅಪಘಾತಕ್ಕೀಡಾಗಿ 241 ಜನ ಸಾವನ್ನಪ್ಪಿದ್ದರು. ಘಟನೆಯ ಬೆನ್ನಲ್ಲೇ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು, ನಾಳೆ ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದ್ದರು.
ಅದರಂತೆ ಇಂದು ಪ್ರಧಾನಿ ಮೋದಿ ಅಹಮದಾಬಾದ್ ಗೆ ತಲುಪಿದ್ದು, ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಘಟನೆಗೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದು, ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ನೆರವನ್ನು ಒದಗಿಸಲು ಸೂಚಿಸಲಾಗಿದೆ.
ದುರಂತಕ್ಕೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತ ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ಇದು ಪದಗಳಿಗೆ ಮೀರಿದ ಹೃದಯವಿದ್ರಾವಕ ಘಟನೆ. ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ಬಗ್ಗೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

