ನವದೆಹಲಿ: ನೀಟ್ ಪ್ರತಿಭಟನೆಯ ವೇಳೆ ನಡೆದ ಘಟನೆಗಳಿಗೆ ಕೇಂದ್ರ ಸರ್ಕಾರ ಮತ್ತು ಗೃಹ ಸಚಿವರು ಕಾರಣರಾಗಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿದ್ಯಾರ್ಥಿಗಳಲ್ಲಿ ಕ್ಷಮೆ ಕೇಳಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ಪ್ರತಿಭಟನೆ ಮಾಡುವ ವೇಳೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ನಂತರ ರಾಹುಲ್ ಅವರನ್ನು ಮಾಡೆಲ್ ಟೌನ್‌ನಲ್ಲಿರುವ ಛತ್ರಸಾಲ್ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಿದ್ದರು.

ಛತ್ರಸಾಲ್ ಕ್ರೀಡಾಂಗಣದಲ್ಲಿ ಮಾತನಾಡಿರುವ ವಿಡಿಯೊವೊಂದನ್ನು ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ವಿದ್ಯಾರ್ಥಿಗಳ ಸಮಸ್ಯೆ ಕುರಿತಂತೆ ಚರ್ಚಿಸಲು ಕೇಂದ್ರ ಸರ್ಕಾರಕ್ಕೆ ಯಾವುದೇ ಆಸಕ್ತಿಯಿಲ್ಲ. ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ದಾಳಿ ಮಾಡಿದ್ದಾರೆ. ಇದು ಪ್ರಮುಖ ವಿಷಯವಾಗಿದ್ದು, ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ದೇಶದ ಗಮನಕ್ಕೆ ತರುವ ಉದ್ದೇಶದಿಂದ ಪ್ರಧಾನಿ ನಿವಾಸದ ಎದುರು ನಾವು ಪ್ರತಿಭಟನೆ ಮಾಡಿದ್ದೇವೆ’ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಅವರಿಗೆ ನಾನೊಂದು ಸಲಹೆ ನೀಡುತ್ತೇನೆ. ಅವರು ದೇಶದ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಮತ್ತು ಸಾಧ್ಯವಾದಷ್ಟು ಬೇಗ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಬೇಕು ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಅವರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂದೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ವಿಷಯದ ಕುರಿತು ಬುಧವಾರ(ಜುಲೈ 22) ಚರ್ಚಿಸಲು ಬಯಸಿದ್ದು, ನಮಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.