ನವದೆಹಲಿ: ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮಹತ್ವದ ಸೂಚನೆ ನೀಡಿದ್ದಾರೆ. ಇಲೆಕ್ಟ್ರಾನಿಕ್ ಉಪಕರಣಗಳನ್ನು ಕೆಲಸ ಮುಗಿದ ತಕ್ಷಣ ಲಾಗ್ ಔಟ್ ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಇತ್ತೀಚಿಗೆ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಪ್ರಧಾನಿಯವರು ಈ ಎಚ್ಚರಿಕೆಗಳನ್ನು ನೀಡಿದ್ದಾರೆ.

ಕೆಲಸ ಮುಗಿದ ತಕ್ಷಣ ನಿಮ್ಮ ಸಿಸ್ಟಂನಿಂದ ನೀವು ಲಾಗ್ ಔಟ್ ಮಾಡುತ್ತೀರಾ? ನಾನು ಖಂಡಿತಾ ಮಾಡುತ್ತೇನೆ. ಸೈಬರ್ ಭದ್ರತೆಗೆ ಬಂದಾಗ ಇದು ಬಹಳ ಮುಖ್ಯ. ದಿನದ ಕೊನೆಯಲ್ಲಿ ಎಲ್ಲಾ ಸಿಸ್ಟಮ್‌ಗಳು ಲಾಗ್‌ಔಟ್ ಆಗಿವೆಯೇ? ಇಲ್ಲವೇ ಎಂಬುದನ್ನು ಕಚೇರಿಗಳಲ್ಲಿ ಖಚಿತಪಡಿಸಿಕೊಳ್ಳುವ ಕೆಲಸವನ್ನು ಒಬ್ಬ ವ್ಯಕ್ತಿಗೆ ನಿಯೋಜಿಸಬೇಕು. ನಾನು ಮನೆಗೆ ಹೋದಾಗ ನನ್ನ ಎಲೆಕ್ಟ್ರಾನಿಕ್ ಸಾಧನಗಳಿಂದ ಲಾಗ್ ಔಟ್ ಆಗುತ್ತೇನೆ. ಅವುಗಳನ್ನು ತೆರೆದಿಟ್ಟರೆ ಸೈಬರ್ ದಾಳಿಯ ಅಪಾಯ ಹೆಚ್ಚಾಗಿರುತ್ತದೆ ಎಂದು ಮೋದಿಯವರು ಎಚ್ಚರಿಸಿದ್ದಾರೆ.

ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಕಳೆದ ಮಾರ್ಚ್ ನಲ್ಲಿ ಪ್ರಧಾನಿ ಮೋದಿಯವರೊಂದಿಗೆ ‘ಚಾಯ್ ಪೇ ಚರ್ಚೆ’ಯಲ್ಲಿ ಭಾಗವಹಿಸಿದ್ದಾಗಲೂ ಸೈಬರ್ ಭದ್ರತೆ ಕುರಿತು ಚರ್ಚಿಸಿದ್ದರು.