ಒಡಿಶಾ: ಕಳೆದ ಮೂರು ತಿಂಗಳಿನಿಂದ ಪಿಂಚಣಿ ಸಿಗದ ಕಾರಣ ಖಿನ್ನತೆಗೊಳಗಾಗಿ 66 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬೆನ್ನಲ್ಲೇ ಒಡಿಶಾದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮೃತರನ್ನು ಗಂಜಾಂ ಜಿಲ್ಲೆಯ ಬೇಗುನಿಯಾಪದ ಬ್ಲಾಕ್‌ನ ಚಾಧೇಯಪದ ಗ್ರಾಮದ 66 ವರ್ಷದ ಬಿ ಸಾಬಿತ್ರಿ ಡೋರಾ ಎಂದು ಗುರುತಿಸಲಾಗಿದೆ. ಈ ಘಟನೆ ಭಾನುವಾರ ನಡೆದಿದ್ದರೂ ಮಂಗಳವಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪುತ್ರಿ ಬಿ ಚಂಡಿ ಡೋರಾ, “ನನ್ನ ತಾಯಿ ತನ್ನ ಮೂವರು ಹೆಣ್ಣುಮಕ್ಕಳ ಮದುವೆಯ ನಂತರ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಆಹಾರ ಭದ್ರತಾ ಯೋಜನೆಯಡಿಯಲ್ಲಿ ಮಾಸಿಕ 1,000 ರೂ. ಮತ್ತು 5 ಕೆಜಿ ಅಕ್ಕಿಯ ಮೇಲೆ ಅವರು ಸಂಪೂರ್ಣವಾಗಿ ಅವಲಂಬಿತರಾಗಿದ್ದರು. ಪಿಂಚಣಿ ಮೊತ್ತ ಜಮಾ ಆಗಿದೆಯೇ ಎಂದು ಪರಿಶೀಲಿಸಲು ತನ್ನ ತಾಯಿ ಪದೇ ಪದೇ ಬ್ಯಾಂಕ್‌ಗೆ ಭೇಟಿ ನೀಡುತ್ತಿದ್ದರು” ಎಂದು ತಿಳಿಸಿದ್ದಾರೆ.
ಬೆಗುನಿಯಪದಾ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಸಮಂತ್ ಮಾತನಾಡಿ, “ಈ ಘಟನೆ ದುರದೃಷ್ಟಕರ. ಆ ಮಹಿಳೆ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯಡಿ ಫಲಾನುಭವಿಯಾಗಿದ್ದು, ಮಾರ್ಚ್‌ನಲ್ಲಿ ಕೊನೆಯದಾಗಿ ಪಿಂಚಣಿ ಪಡೆದಿದ್ದರು. ಅವರ ಸಾವಿನ ಮಾಹಿತಿ ಪಡೆದ ನಂತರ, ನಾನು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ಪ್ರಾಥಮಿಕ ತನಿಖೆ ನಡೆಸುವಂತೆ ಆದೇಶಿಸಲಾಗಿದೆ” ಎಂದು ಹೇಳಿದ್ದಾರೆ.
ಗಂಜಾಂ ಜಿಲ್ಲೆಯ ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (ಎನ್‌ಎಸ್‌ಎಪಿ) ಅಡಿಯಲ್ಲಿ 1.49 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕಳೆದ ಮೂರು ತಿಂಗಳಿನಿಂದ ಮಾಸಿಕ ಪಿಂಚಣಿ ಸಿಕ್ಕಿಲ್ಲ. ಇದು ತಾಂತ್ರಿಕ ಸಮಸ್ಯೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಗಪಹಂಡಿ ಬ್ಲಾಕ್‌ನಲ್ಲಿ ಧರಣಿ ನಡೆಸುತ್ತಿರುವ ಕೈತಖಂಡಿಯ ಸರಪಂಚ ಮನೋರಂಜನ್ ಗೌಡ, “ಹಲವು ಫಲಾನುಭವಿಗಳು ತೀರಾ ನಿರ್ಗತಿಕರು. ಪಿಂಚಣಿ ಮೊತ್ತವನ್ನೇ ಅವಲಂಬಿಸಿದ್ದಾರೆ. ಪಿಂಚಣಿ ನಿಯಮಿತವಾಗಿ ಸಿಗದ ಕಾರಣ ಈಗ ಸಂಕಷ್ಟ ಎದುರಿಸುತ್ತಿದ್ದಾರೆ. ತಕ್ಷಣ ಪಿಂಚಣಿ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಬಡವರಿಗೆ ಮತ್ತು ವೃದ್ಧರಿಗೆ ತಿಂಗಳ ಆಸರೆಯಾಗಿರುವ ಪಿಂಚಣಿಯನ್ನು ಸತತ ಮೂರು ತಿಂಗಳಿನಿಂದ ಸ್ಥಗಿತಗೊಂಡಿರುವುದು ಬಿಜೆಪಿಯ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.

