ಶ್ರೀನಗರ: ಇತ್ತೀಚೆಗೆ ಭಯೋತ್ಪಾದಕ ದಾಳಿ ಹೆಚ್ಚಾಗುತ್ತಿದೆ. ಭಾರತ ಸೇನೆ ಹೆದರದೆ ಮುನ್ನುಗ್ಗುತ್ತಿದೆಯಾದರೂ ಕೆಲವರು ಪ್ರಾಣ ತ್ಯಾಗ ಮಾಡಿದ್ದಾರೆ.ದೋಡಾ ಜಿಲ್ಲೆಯಲ್ಲಿ ಜುಲೈ 16ರಂದು ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಅಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಈ ನಡುವೆ ಉನ್ನತ ಮೂಲಗಳು ಭಯೋತ್ಪಾದಕರಿಗೆ ಪಾಕಿಸ್ತಾನ ಒದಗಿಸುವ ಧನಸಹಾಯದ ಬಗ್ಗೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿವೆ. ಇದರಲ್ಲಿ ಗಡಿಯುದ್ದಕ್ಕೂ ಪಾಕಿಸ್ತಾನ ನಿರ್ವಹಿಸುತ್ತಿರುವ ಭಯೋತ್ಪಾದಕ ಶಿಬಿರಗಳ ಪಟ್ಟಿಯೂ ಸೇರಿದೆ.

ಪಾಕಿಸ್ತಾನ ನರಿ ಬುದ್ದಿಯನ್ನು ಇದೀಗ ಮೂಲಗಳು ಬಹಿರಂಗಪಡಿಸಿದ್ದು ಪಾಕಿಸ್ತಾನವು ತರಬೇತಿ ಪಡೆದ ಭಯೋತ್ಪಾದಕರು, ಮಾಜಿ ವಿಶೇಷ ಸೇವಾ ಗುಂಪುಗಳ ಸದಸ್ಯರು ಮತ್ತು ಕೂಲಿ ಸೈನಿಕರನ್ನು ಭಾರತಕ್ಕೆ ಕಳುಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ಗುಂಪಿಗೆ ಕನಿಷ್ಠ 1 ಲಕ್ಷ ರೂ. ಒದಗಿಸಲಾಗುತ್ತದೆ. ಜತೆಗೆ ಪಾಕಿಸ್ತಾನವು ಈ ಭಯೋತ್ಪಾದಕರಿಗೆ ಎಂ 4 ರೈಫಲ್‌ಗಳು ಮತ್ತು ಚೀನಾದ ಅತ್ಯಾಧುನಿಕ ಗುಂಡು ನಿರೋಧಕ ಕವಚಗಳನ್ನೂ ಪೂರೈಸುತ್ತಿದೆ. ಒಳನುಸುಳುವಿಕೆಯ ಸಮಯದಲ್ಲಿ ಅವರಿಗೆ ಸಹಾಯ ಮಾಡುವ ಮಾರ್ಗದರ್ಶಿಗಳು 10,000 ರೂ.ಗಳಿಂದ 50,000 ರೂ.ವರೆಗೆ ಪಡೆಯುತ್ತಿದ್ದಾರೆ. ಹೆಚ್ಚುವರಿಯಾಗಿ ಭಯೋತ್ಪಾದಕರು ಐಕಾಮ್ ರೇಡಿಯೋ ಸೆಟ್‌ಗಳ ಮೂಲಕ ಸ್ಯಾಮ್‌ಸಂಗ್‌ ಫೋನ್‌ ಮತ್ತು ವೈ ಎಸ್ಎಂಎಸ್ ಅನ್ನು ಬಳಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.