ಡ್ರಾಸ್ : ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಉದ್ದೇಶಗಳು ಎಂದಿಗೂ ಈಡೇರುವುದಿಲ್ಲ ಎಂದು ಕಾರ್ಗಿಲ್‌ನ ಡ್ರಾಸ್ ಕಣಿವೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಡ್ರಾಸ್ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

‘ಈ ಜಾಗದಿಂದ ನನ್ನ ಮಾತುಗಳು ಭಯೋತ್ಪಾದನೆಗೆ ಬೆಂಬಲ ನೀಡುವುವರಿಗೆ ನೇರವಾಗಿ ಕೇಳುತ್ತವೆ. ಸರಿಯಾಗಿ ಕೇಳಿಸಿಕೊಳ್ಳಿ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರುವುದಿಲ್ಲ’ ಎಂದು ಪರೋಕ್ಷವಾಗಿ ಪ್ರತ್ಯೇಕವಾದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇತಿಹಾಸದಿಂದ ಪಾಕಿಸ್ತಾನ ಎಂದಿಗೂ ಪಾಠ ಕಲಿಯಲಿಲ್ಲ. ಇದರಿಂದ ಪದೇ ಪದೇ ಪೆಟ್ಟು ತಿನ್ನುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಾಠ ಕಲಿಯದ ಪಾಕಿಸ್ತಾನ ಕಾಲು ಕೆರೆದುಕೊಂಡು ಜಗಳ ಮಾಡಲು ಹೋಗಿ ಪ್ರತಿ ಭಾರಿ ಮುಖಭಂಗ ಅನುಭವಿಸಿದೆ ಎಂದು ಹೇಳಿದ್ದಾರೆ.