ವದೆಹಲಿ: ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ಹಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ. ಹಾಗಾಗಿ 4,500ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಬಾಂಗ್ಲಾದೇಶದಿಂದ ಸ್ವದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಭಾನುವಾರ ತಿಳಿಸಿದೆ.

ನೇಪಾಳದಿಂದ 500, ಭೂತಾನ್‌ನಿಂದ 38 ಮತ್ತು ಮಾಲ್ಡೀವ್ಸ್‌ನಿಂದ ಒಬ್ಬರು ಭಾರತಕ್ಕೆ ಆಗಮಿಸಿದ್ದಾರೆ ಎಂದು ಎಂಇಎ ತಿಳಿಸಿದೆ. ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿವೆ ಎಂದು ಅದು ಹೇಳಿದೆ.

‘ಈವರೆಗೆ 4,500ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ. ಭಾರತೀಯ ಪ್ರಜೆಗಳ ಸುರಕ್ಷಿತ ಪ್ರಯಾಣಕ್ಕಾಗಿ ರಾಯಭಾರ ಕಚೇರಿ ಭದ್ರತಾ ಬೆಂಗಾವಲು ವ್ಯವಸ್ಥೆಯನ್ನೂ ಮಾಡುತ್ತಿದೆ’ ಎಂದು ಎಂಇಎ ಹೇಳಿದೆ.

ಬಾಂಗ್ಲಾದೇಶದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಉಳಿದಿರುವ ವಿದ್ಯಾರ್ಥಿಗಳೊಂದಿಗೆ ಭಾರತೀಯ ರಾಯಭಾರ ಕಚೇರಿಗಳು ನಿಯಮಿತವಾಗಿ ಸಂಪರ್ಕದಲ್ಲಿವೆ. ಅವರಿಗೆ ಅಗತ್ಯ ನೆರವು ನೀಡುತ್ತಿವೆ ಎಂದು ಸಚಿವಾಲಯ ಹೇಳಿದೆ.‌‌

8,500 ವಿದ್ಯಾರ್ಥಿಗಳು ಸೇರಿದಂತೆ ಸುಮಾರು 15,000 ಭಾರತೀಯ ಪ್ರಜೆಗಳು ಬಾಂಗ್ಲಾದೇಶದಲ್ಲಿದ್ದಾರೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.