ಹೊಸದಿಲ್ಲಿ: ಒಮಾನ್ ಕರಾವಳಿಯಲ್ಲಿ13 ಭಾರತೀಯರು ಸೇರಿದಂತೆ 16 ಸಿಬಂದಿಯನ್ನು ಹೊತ್ತೊಯ್ಯುತ್ತಿದ್ದ ತೈಲ ಟ್ಯಾಂಕರ್ ಮುಳುಗಿದೆ ಎಂದು ದೇಶದ ಕಡಲ ಭದ್ರತಾ ಕೇಂದ್ರ ಮಂಗಳವಾರ ತಿಳಿಸಿದೆ. ಸಿಬಂದಿಗಳು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಶೋಧ ಮತ್ತು ರಕ್ಷಣ ಕಾರ್ಯಾಚರಣೆ ನಡೆಯುತ್ತಿದೆ.

ಕೊಮೊರೊಸ್ ಧ್ವಜದ ತೈಲ ಟ್ಯಾಂಕರ್ ‘ಪ್ರೆಸ್ಟೀಜ್ ಫಾಲ್ಕನ್’ ನಲ್ಲಿ 13 ಭಾರತೀಯರು ಮತ್ತು ಮೂವರು ಶ್ರೀಲಂಕಾದವರು ಇದ್ದರು ಎಂದು ಕಡಲ ಭದ್ರತಾ ಕೇಂದ್ರವು ಟ್ವೀಟ್ ಮಾಡಿದೆ. ಸೋಮವಾರ ಒಮಾನಿ ಬಂದರಿನ ಡುಕ್ಮ್ ಬಳಿ ರಾಸ್ ಮದ್ರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಮುಳುಗಿದೆ.

LSEG ಯ ಶಿಪ್ಪಿಂಗ್ ಮಾಹಿತಿಯ ಪ್ರಕಾರ ಟ್ಯಾಂಕರ್ ಒಮಾನ್ ಬಂದರಿನ ಏಡೆನ್‌ಗೆ ಹೋಗುತ್ತಿತ್ತು. ತೈಲ ಟ್ಯಾಂಕರ್ ಮುಳುಗಿದೆ ಮತ್ತು ತಲೆಕೆಳಗಾದಿದೆ ಎಂದು ಒಮಾನ್‌ನ ಕಡಲ ಭದ್ರತಾ ಕೇಂದ್ರವು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ. ಆದಾಗ್ಯೂ, ತೈಲ ಅಥವಾ ತೈಲ ಉತ್ಪನ್ನಗಳು ಸಮುದ್ರಕ್ಕೆ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಲ್ಲ.