ಗಾಂಧಿನಗರ: ಜೈನ ದೇವಾಲಯಗಳು ಹಾಗೂ ಜೈನ ಯಾತ್ರಿಕರಿಗೆ ಪ್ರಸಿದ್ಧಿ ಪಡೆದಿರುವ ಗುಜರಾತ್‌ನ ಭಾವ್‌ನಗರ ಜಿಲ್ಲೆಯ ಪಾಲಿತಾನಾ ಪಟ್ಟಣದಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ.

ಮಾಂಸ ಮಾರಾಟ, ಮಾಂಸ ಮಾರಾಟ ಕುರಿತು ಬೋರ್ಡ್‌ ಅಳವಡಿಸುವುದು, ಮಾಂಸ ಸೇವಿಸುವುದನ್ನು ಈ ಪಟ್ಟಣದಲ್ಲಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಆ ಮೂಲಕ ಜಗತ್ತಿನಲ್ಲೇ ಮಾಂಸಾಹಾರವನ್ನು ನಿಷೇಧಿಸಿದ ಮೊದಲ ಪಟ್ಟಣ ಅಥವಾ ನಗರ  ಪಾಲಿತಾನಾ.

ಜೈನರು ಹಾಗೂ ಜೈನ ಸನ್ಯಾಸಿಗಳಿಗೆ ಹೆಸರುವಾಸಿಯಾಗಿರುವ ಪಟ್ಟಣದಲ್ಲಿ ಸುಮಾರು 250 ಮಾಂಸದಂಗಡಿಗಳಿವೆ ಎಂಬುದಾಗಿ 200 ಜೈನ ಸನ್ಯಾಸಿಗಳು ಪ್ರತಿಭಟನೆ ನಡೆಸಿದ್ದರು. ಪವಿತ್ರ ಯಾತ್ರಾ ಸ್ಥಳಗಳಲ್ಲಿ ಮಾಂಸ ಮಾರಾಟ ನಿಷೇಧಿಸಬೇಕು ಎಂಬುದಾಗಿ ಅವರು ಪಟ್ಟು ಹಿಡಿದಿದ್ದರು.

ಪಟ್ಟಣದಲ್ಲಿ ಮಾಂಸ ಮಾರಾಟ, ಸೇವನೆಯನ್ನು ಕಾನೂನುಬಾಹಿರ ಎಂಬುದಾಗಿ ಘೋಷಿಸಲಾಗಿದೆ. ಇದರ ಕುರಿತು ಈಗ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಗುಜರಾತ್‌ನ ಪಾಲಿತಾನಾ ಪಟ್ಟಣವು ಜೈನ ದೇವಾಲಯಗಳಿಗೆ ಹೆಸರಾಗಿದೆ. ಶತ್ರುಂಜಯ ಗುಡ್ಡಗಾಡು ಪ್ರದೇಶಗಳಲ್ಲಿರುವ ನಗರವು ಜೈನ ದೇವಾಲಯಗಳ ನಗರ ಎಂದೇ ಖ್ಯಾತಿಯಾಗಿದೆ.

ಈ ಪಟ್ಟಣದಲ್ಲಿ ಸುಮಾರು 800 ದೇವಾಲಯಗಳಿವೆ. ತುಂಬ ಖ್ಯಾತಿ ಪಡೆದಿರುವ ಆದಿನಾಥ ದೇವಾಲಯವೂ ಇದೆ. ಜೈನರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಾಲಿತಾನಾ ನಗರಕ್ಕೆ 5ನೇ ಶತಮಾನದ ಇತಿಹಾಸವಿದೆ. ಜೈನ ಧರ್ಮೀಯರು ಮಾಂಸಾಹಾರ ಸೇವಿಸುವುದಿಲ್ಲ ಹಾಗೂ ಅದನ್ನು ಜೀವನ ಪೂರ್ತಿ ಪಾಲಿಸುತ್ತಾರೆ. ದೇಶ-ವಿದೇಶಗಳಿಂದ ಜೈನರು ಇಲ್ಲಿಗೆ ಆಗಮಿಸುತ್ತಾರೆ. ಪಾಲಿತಾನಾ ನಗರಕ್ಕೆ ಆಗಮಿಸಿ, ಆದಿನಾಥ ದೇವಾಲಯಕ್ಕೆ ಭೇಟಿ ನೀಡಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಜೈನ ಸಮುದಾಯದವರಲ್ಲಿದೆ.