ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಭಾಗವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಇಂದು ಮಂಡಿಸಲಿದ್ದಾರೆ.

ಲೋಕಸಭಾ ವ್ಯವಹಾರಗಳ ಪಟ್ಟಿಯ ಪ್ರಕಾರ, ಸದನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡನೆ ಆರಂಭವಾಗಲಿದೆ. ಸೀತಾರಾಮನ್ ಅವರು 2026-27ನೇ ಸಾಲಿನ ಭಾರತ ಸರ್ಕಾರದ ಅಂದಾಜು ಆದಾಯ ಮತ್ತು ವೆಚ್ಚದ ಬಜೆಟ್‌ ಮಂಡನೆ ಮಾಡಲಿದ್ದಾರೆ.

ಲೋಕಸಭೆಯಲ್ಲಿ ಹಣಕಾಸು ಮಸೂದೆ 2026 ಅನ್ನು ಮಂಡಿಸಲು ಸೀತಾರಾಮನ್ ಅನುಮತಿ ಕೋರಲಿದ್ದಾರೆ. ಅವರು ಮಸೂದೆಯನ್ನು ಔಪಚಾರಿಕವಾಗಿ ಮಂಡಿಸಲಿದ್ದಾರೆ ಎಂದು ವ್ಯವಹಾರಗಳ ಪಟ್ಟಿ ಹೇಳಿದೆ.

ಹಣಕಾಸು ಸಚಿವ ಸೀತಾರಾಮನ್ ಅವರು ಭಾರತದ ಸತತ ಒಂಬತ್ತನೇ ಕೇಂದ್ರ ಬಜೆಟ್ ಅನ್ನು ಇಂದು ಮಂಡಿಸಲಿದ್ದಾರೆ. ಗುರುವಾರ, ಸೀತಾರಾಮನ್ ಅವರು 2025-26ನೇ ಹಣಕಾಸು ವರ್ಷದ ಭಾರತದ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು.

ಬಜೆಟ್ ಅಧಿವೇಶನವು 65 ದಿನಗಳಲ್ಲಿ 30 ಸಭೆಗಳನ್ನು ನಡೆಸಿ, ಏಪ್ರಿಲ್ 2 ರಂದು ಕೊನೆಗೊಳ್ಳುತ್ತದೆ. ಫೆಬ್ರವರಿ 13 ರಂದು ಉಭಯ ಸದನಗಳು ವಿರಾಮಕ್ಕಾಗಿ ಮುಂದೂಡಲ್ಪಡುತ್ತವೆ. ಮಾರ್ಚ್ 9 ರಂದು ಮತ್ತೆ ಸಭೆ ಸೇರುತ್ತವೆ. ಇದರಿಂದಾಗಿ ಸ್ಥಾಯಿ ಸಮಿತಿಗಳು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಅನುದಾನದ ಬೇಡಿಕೆಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.